ಈಗಾಗಲೇ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಏಕರೂಪದಲ್ಲಿ ನಡೆಸಿದ ಮಾದರಿಯಲ್ಲಿ ಪ್ರಥಮ ಪಿಯುಸಿಯಲ್ಲೂ ‘ಏಕರೂಪದ ವಾರ್ಷಿಕ ಪರೀಕ್ಷಾ ವ್ಯವಸ್ಥೆ’ ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈಗಾಗಲೇ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಏಕರೂಪದಲ್ಲಿ ನಡೆಸಿದ ಮಾದರಿಯಲ್ಲಿ ಪ್ರಥಮ ಪಿಯುಸಿಯಲ್ಲೂ ‘ಏಕರೂಪದ ವಾರ್ಷಿಕ ಪರೀಕ್ಷಾ ವ್ಯವಸ್ಥೆ’ ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಈವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕಾಲೇಜು ಹಂತದಲ್ಲೇ ಸಿದ್ಧಪಡಿಸಿ, ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಿಂದಾಗಿ ಕಾಲೇಜಿನಿಂದ ಕಾಲೇಜಿಗೆ ಪ್ರಶ್ನೆಪತ್ರಿಕೆಯ ಗುಣಮಟ್ಟ, ಕಠಿಣತೆ ಹಾಗೂ ಮೌಲ್ಯಮಾಪನದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದವು. ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಮತ್ತು ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಮೌಲ್ಯಮಾಪನ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಪದವಿ ಪೂರ್ವ ಕಾಲೇಜುಗಳು ಸೇರಿ ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೂ ಈ ನಿಯಮ ಅನ್ವಯವಾಗಲಿದೆ.ಪ್ರಮುಖ ಮಾರ್ಗಸೂಚಿಗಳು:
ಏಕರೂಪದ ಪ್ರಶ್ನೆಪತ್ರಿಕೆ ಮತ್ತು ವೇಳಾಪಟ್ಟಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ರಾಜ್ಯದ ಎಲ್ಲ ಕಾಲೇಜುಗಳಿಗೆ ಅನ್ವಯವಾಗುವಂತೆ ಏಕರೂಪದ ಪರೀಕ್ಷಾ ವೇಳಾಪಟ್ಟಿ ಹಾಗೂ ಡಿಜಿಟಲ್ ರೂಪದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಒದಗಿಸಲಿದೆ.ಪರೀಕ್ಷಾ ವೇಳಾಪಟ್ಟಿಯಂತೆ ಗೌಪ್ಯತೆ ಕಾಯ್ದುಕೊಂಡು ಡಿಜಿಟಲ್ ರೂಪದಲ್ಲೇ ಸಂಬಂಧಿಸಿದ ಕಾಲೇಜುಗಳಿಗೆ ಪ್ರಶ್ನೆಪತ್ರಿಕೆಗಳನ್ನು ರವಾನಿಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ನಿಗದಿತ ವೇಳಾಪಟ್ಟಿಯಂತೆ ನಡೆಸಲಾಗುತ್ತದೆ. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಯಾ ಕಾಲೇಜುಗಳ ಪ್ರಾಂಶುಪಾಲರ ಮೇಲ್ವಿಚಾರಣೆಯಲ್ಲೇ ನಡೆಯಲಿದೆ. ಪ್ರಾಯೋಗಿಕ ಹಾಗೂ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಇಲಾಖೆಯ ನಿಗದಿತ ತಂತ್ರಾಂಶದಲ್ಲಿ ಕಾಲಮಿತಿಯೊಳಗೆ ಕಡ್ಡಾಯವಾಗಿ ನಮೂದಿಸಬೇಕು. ಕಾಲೇಜುಗಳು ಸಿದ್ಧಪಡಿಸಿದ ಫಲಿತಾಂಶವನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ ಅನುಮೋದಿಸಿದ ಬಳಿಕವಷ್ಟೇ ಪ್ರಕಟಿಸಬೇಕಾಗುತ್ತದೆ.ಹೀಗಿರುತ್ತೆ ಪರೀಕ್ಷಾ ವ್ಯವಸ್ಥೆ-ಶಾಲಾ ಪರೀಕ್ಷೆ, ಮೌಲ್ಯ ನಿರ್ಣಯ ಮಂಡಳಿಯಿಂದಲೇ ಕಾಲೇಜುಗಳಿಗೆ ಏಕರೂಪದ ಪರೀಕ್ಷಾ ವೇಳಾಪಟ್ಟಿ, ಡಿಜಿಟಲ್ ಪ್ರಶ್ನೆಪತ್ರಿಕೆ ಸಿದ್ಧತೆ.-ಬಳಿಕ ಈ ಪರೀಕ್ಷಾ ವೇಳಾಪಟ್ಟಿ, ಡಿಜಿಟಲ್ ಪ್ರಶ್ನೆಪತ್ರಿಕೆಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ರವಾನೆ.-ವೇಳಾಪಟ್ಟಿಯಂತೆ ಗೌಪ್ಯತೆ ಕಾಯ್ದುಕೊಂಡು ಡಿಜಿಟಲ್ ರೂಪದಲ್ಲೇ ಆಯಾ ಕಾಲೇಜುಗಳಿಗೆ ಪ್ರಶ್ನೆಪತ್ರಿಕೆ ಪೂರೈಕೆ. -ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ನಿಗದಿತ ವೇಳಾಪಟ್ಟಿಯಂತೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಕ್ರಮ.-ಪರೀಕ್ಷೆ ಬಳಿಕ ಆಯಾ ಕಾಲೇಜುಗಳ ಪ್ರಾಂಶುಪಾಲರ ಮೇಲ್ವಿಚಾರಣೆಯಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ.-ಕಾಲೇಜುಗಳು ಸಿದ್ಧಪಡಿಸಿದ ಫಲಿತಾಂಶವನ್ನು ಜಿಲ್ಲಾ ಉಪನಿರ್ದೇಶಕರು ಪರಿಶೀಲಿಸಿ, ಅನುಮೋದಿಸಿದ ಬಳಿಕ ಪ್ರಕಟಣೆ.