ಚನ್ನಪಟ್ಟಣ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಸಣ್ಣ ನೆರವು ಕೂಡ ಅವರ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಹ ಶಕ್ತಿಯಾಗಬೇಕು ಎಂದು ಸಮಾಜ ಸೇವಕ ಪ್ರಸನ್ನ ಪಿ.ಗೌಡ ತಿಳಿಸಿದರು.
ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಮೂಲಕ ಅವರಲ್ಲಿ ಸಮಾನತೆಯ ಭಾವನೆ ಮೂಡಿಸಲು ಸಾಧ್ಯವಾಗಿರುವುದು ಸಂತಸದ ಸಂಗತಿ ಎಂದರು.ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ವಿ.ಬಿ.ಚಂದ್ರಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಅತ್ಯಂತ ಶ್ರೇಷ್ಠವಾದ ಸಮಾಜ ಸೇವೆಯಾಗಿದೆ. ವಿದ್ಯಾರ್ಥಿಗಳ ಅಗತ್ಯವನ್ನು ಅರಿತು ಅವರಿಗೆ ನೆರವಾಗುತ್ತಿರುವ ಪ್ರಸನ್ನ ಪಿ.ಗೌಡ ಅವರ ಸೇವಾ ಮನೋಭಾವ ಶ್ಲಾಘನೀಯ. ಸಮಾಜದ ಇತರರೂ ಇಂತಹ ಕಾರ್ಯಗಳಿಗೆ ಕೈಜೋಡಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕರಿಸಬೇಕು ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಉದ್ಯಮಿ ಹಾಗೂ ಸಮಾಜ ಸೇವಕ ಪ್ರಸನ್ನ ಪಿ.ಗೌಡ ಅವರನ್ನು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಆನಂತಮೂರ್ತಿ, ನಿರ್ದೇಶಕರಾದ ಎಸ್.ಟಿ. ನಾರಾಯಣಗೌಡ, ಎಂ.ಸಿ.ಎಚ್. ಮೆಹರೀಶ್ ಸೇರಿದಂತೆ ಹಲವರು ಇದ್ದರು.
ಪೊಟೋ೧೩ಸಿಪಿಟಿ೨: ಚನ್ನಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.