ಸಾರಾಂಶ
ರಾಮನಗರ: ದೇಶ ಅಭಿವೃದ್ಧಿ ಹೊಂದಬೇಕಾದರೆ ಗುಣಮಟ್ಟದ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಉತ್ತಮ ಆರೋಗ್ಯ ಕಲ್ಪಿಸಬೇಕು. ಆದರೆ, ಇದೆಲ್ಲವನ್ನು ಕಡೆಗಣಿಸಿರುವ ಕೇಂದ್ರ ಬಜೆಟ್ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಉದ್ಯೋಗ, ಆರೋಗ್ಯ ಮಾತ್ರವಲ್ಲದೆ ಕೂಲಿ ಕಾರ್ಮಿಕ ವರ್ಗವನ್ನು ನಿರ್ಲಕ್ಷ್ಯ ಮಾಡಲಾಗಿದೆ. ವಾರ್ಷಿಕ 12 ಲಕ್ಷ ಆದಾಯದವರೆಗೆ ತೆರಿಗೆ ಇಲ್ಲ ಎಂಬ ವಿಚಾರವನ್ನೇ ಪ್ರಧಾನವಾಗಿಟ್ಟುಕೊಂಡು ಡಂಗೂರ ಸಾರುತ್ತಿದ್ದಾರೆ ಎಂದು ಟೀಕಿಸಿದರು.ದೇಶದಲ್ಲಿ 12 ಲಕ್ಷದವರೆಗೆ ಆದಾಯವಿರುವ ವ್ಯಕ್ತಿ ಅಥವಾ ಕುಟುಂಬಗಳು ಎಷ್ಟಿವೆ ಎಂಬ ಅಂಕಿ ಅಂಶಗಳ್ನು ಮರೆಮಾಚಲಾಗುತ್ತಿದೆ. 3-4 ಕೋಟಿ ನೌಕರರಲ್ಲಿ ಎಷ್ಟು ಜನರ ಆದಾಯ 12 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದಾರೆ ಎಂಬುದರ ಅಂಕಿ ಅಂಶಗಳ ಮೇಲೆ ಬೆಳಕು ಚೆಲ್ಲಿದರೆ ಕೇಂದ್ರದ ನಾಟಕ ಬಯಲಾಗುತ್ತದೆ. ಮಧ್ಯಮ ವರ್ಗದ ಹೆಸರಿನಲ್ಲಿ ನಡೆಯುತ್ತಿರುವ ಈ ವಂಚನೆಯ ಜಾಲದಲ್ಲಿ ಇಂದಿಗೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯಕ್ಕಾಗಿ 80 ಕೋಟಿ ಜನರು ಸಾಲುಗಟ್ಟಿ ನಿಲ್ಲುತ್ತಿರುವುದನ್ನು ಮರೆ ಮಾಚಲಾಗುತ್ತಿದೆ ಎಂದು ಹೇಳಿದರು.
ಬಡತನ ರೇಖೆಗಿಂತ ಕೆಳಗಿರುವ ಮತ್ತು ಮೇಲಿರುವ ಜನರ ಆರ್ಥಿಕ ಏಳಿಗೆ ಮತ್ತು ಸ್ವಾವಲಂಬಿ ಬದುಕಿನ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ದೇಶದ ನಿಜವಾದ ಏಳಿಗೆ ಎಂದರೆ ದುಡಿಯುವ ಕೈಗಳಿಗೆ ಉದ್ಯೋಗ, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ, ವಾಸಿಸಲು ಯೋಗ್ಯವಾದ ಮನೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ಅಗತ್ಯ ವಸ್ತುಗಲ ಲಭ್ಯತೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಜನರ ಕೈಯಲ್ಲಿ ದೇಶದ ಚುಕ್ಕಾಣಿ ಇದೆ ಎಂಬುದಕ್ಕೆ ಬಜೆಟ್ ಉತ್ತಮ ಉದಾಹರಣೆಯಾಗಿದೆ ಎಂದು ಲೇವಡಿ ಮಾಡಿದರು.2024-25ನೇ ಸಾಲಿನಲ್ಲಿ ಕೃಷಿಗೆ 1.31 ಲಕ್ಷ ಕೋಟಿ ಅನುದಾನ ನೀಡಿದ್ದರೆ, ಈ ಸಾಲಿನಲ್ಲಿ 1.27ಲಕ್ಷ ಕೋಟಿಗೆ ಇಳಿಸಲಾಗಿದೆ. ರಸಗೊಬ್ಬರ ಸಹಾಯಧನವು ಸಹ 1.71 ಲಕ್ಷ ಕೋಟಿಯಿಂದ 1.67 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಅಂದರೆ ಕೃಷಿ ಮತ್ತು ರೈತರ ಅಭಿವೃದ್ಧಿ ಇಲಾಖೆಗೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ.3ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಕನಿಷ್ಟ ಬೆಂಬಲ ಬೆಲೆ ಗ್ಯಾರಂಟಿ ಕಾಯ್ದೆಯ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಡೀ ಬಜೆಟ್ ಮಧ್ಯಮ ವರ್ಗವನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳುವ ಹಾಗೂ ಶ್ರೀಮಂತ ಉದ್ಯಮಿಗಳನ್ನು ಮತ್ತಷ್ಟು ಕೊಬ್ಬಿಸುವ ದಿಸೆಯಲ್ಲಿ ನಯವಾಗಿ ತಯಾರಿಸಲಾಗಿದೆ. ದೇಶದ ಆರ್ಥಿಕ ತಜ್ಞರು, ಬುದ್ಧಿ ಜೀವಿಗಳು ಹಾಗೂ ಪ್ರಜ್ಞಾವಂತರು ಆಳುವ ಸರ್ಕಾರಗಳ ಈ ವಂಚನೆಯ ವಿರುದ್ಧ ಗಟ್ಟಿ ಧ್ವನಿ ಎತ್ತಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕೃಷ್ಣಮೂರ್ತಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಜ ಮೌರ್ಯ, ಗೋಪಿ, ಚಂದ್ರ ಕಾಂತ್ ಪ್ರಸಾದ್, ಮಲ್ಲ ವೀರಯ್ಯ, ಪ್ರವೀಣ್ , ವಿನೋದ್, ಜಯಶ್ರೀ , ರಜನಿ ಇತರರಿದ್ದರು.
ಕೋಟ್ ....ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗಿದೆ. ಅದು ರಾಜ್ಯ ಬಜೆಟ್ ನಲ್ಲಿಯೂ ಮರುಕಳಿಸದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು. ಬಿಎಸ್ಪಿ ಪಕ್ಷ ಬಜೆಟ್ ನಲ್ಲಿ ಸೇರಿಸಬೇಕಾದ ಅಂಶಗಳ ಮನವಿಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದೆ.
-ಎಂ.ಕೃಷ್ಣಮೂರ್ತಿ, ಬಿಎಸ್‌ಪಿ ರಾಜ್ಯಾಧ್ಯಕ್ಷ7ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎಂ.ಕೃಷ್ಣಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.