ಸ್ಥಳೀಯರಿಗೆ ಮೆಸ್ಕಾಂನಲ್ಲಿ ಉದ್ಯೋಗ ನೀಡಲು ಒಕ್ಕೂಟ ಆಗ್ರಹ

| Published : Oct 09 2024, 01:32 AM IST

ಸ್ಥಳೀಯರಿಗೆ ಮೆಸ್ಕಾಂನಲ್ಲಿ ಉದ್ಯೋಗ ನೀಡಲು ಒಕ್ಕೂಟ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹೊರಗುತ್ತಿಗೆ ನೌಕರರಿಂದ ಹೊರ ಉಳಿದಿರುವ ಸ್ಥಳೀಯ ಅನುಭವಿಗಳಿಗೆ ನೇಮಕಾತಿಯಲ್ಲಿ ಮೊದಲ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಕೆಪಿಟಿಸಿಎಲ್‌ ಹೊರಗುತ್ತಿಗೆ ನೌಕರರ ಒಕ್ಕೂಟ ಆಗ್ರಹಿಸಿದೆ.

ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಎಸ್.ಲೋಕೇಶ್ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೊರಗುತ್ತಿಗೆ ನೌಕರರಿಂದ ಹೊರ ಉಳಿದಿರುವ ಸ್ಥಳೀಯ ಅನುಭವಿಗಳಿಗೆ ನೇಮಕಾತಿಯಲ್ಲಿ ಮೊದಲ ಪ್ರಾಮುಖ್ಯತೆ ನೀಡಬೇಕು ಎಂದು ರಾಜ್ಯ ಕೆಪಿಟಿಸಿಎಲ್‌ ಹೊರಗುತ್ತಿಗೆ ನೌಕರರ ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಎಸ್.ಲೋಕೇಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಉಪ್ಪಳ್ಳಿ ಕೆ.ಭರತ್ ಮೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಉಚಿತ ತರಬೇತಿ ಶಿಬಿರ ಆಯೋಜಿಸಿದ್ದು ಜಿಲ್ಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಳೆದ 20 ವರ್ಷಗಳಿಂದ ಕೆಪಿಟಿಸಿಎಲ್ ಮತ್ತು ಮೆಸ್ಕಾಂನಲ್ಲಿ ಎಲ್ಲಾ ರೀತಿಯ ನೌಕರರಿದ್ದಾರೆ ಎಂದರು. ಈ ಪೈಕಿ ಹಲವು ಗುತ್ತಿಗೆದಾರರು ವಿವಿಧ ಕಾರಣಗಳನ್ನು ನೀಡಿ ಗುತ್ತಿಗೆ ಅವಧಿ ಮುಗಿದಿರುವುದರಿಂದ ಕೆಲಸ ನಿರ್ವಹಿಸದಂತೆ ನೌಕರರನ್ನು ಕೈಬಿಡಲಾಗಿದೆ. ಇದರಿಂದ ನೌಕರರು ಒಂದೆಡೆ ಇಲಾಖೆ ಕೆಲಸವಿಲ್ಲದೇ, ಇನ್ನೊಂದೆಡೆ ಬೇರೆ ಕೆಲಸವೂ ದೊರೆಯದೇ ದಿಕ್ಕು ತೋಚದಂತೆ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ನೌಕರರಿಗೆ ಕೆಲಸವಿಲ್ಲ. ಈ ನಡುವೆ ಸರ್ಕಾರ ಹೊಸದಾಗಿ ಉದ್ಯೋಗ ಸೃಷ್ಟಿಸಿ ಈ ರೀತಿ ಶಿಬಿರ ಗಳನ್ನು ಏರ್ಪಡಿಸಿ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಬದಲು ಈಗಾಗಲೇ ಅನುಭವಿಗಳು ಹಾಗೂ ಉದ್ಯೋಗವಿಲ್ಲದೇ ಇರುವಂತಹ ಈ ನೌಕರರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಈ ಸಂಬಂಧ ಸ್ಥಳೀಯ ಅಧಿಕಾರಿಗಳು ಸರ್ಕಾರ, ಸಚಿವರು ಹಾಗೂ ಉನ್ನತಮಟ್ಟದ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿ ಸಾಧಕ-ಬಾಧಕ ಗಳನ್ನು ವಿವರಿಸಬೇಕು. ಜೊತೆಗೆ ತರಬೇತಿ ನಂತರ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದ ಅವರು, ಉತ್ತರಕನ್ನಡ ಅಥವಾ ಇತರೆ ಜಿಲ್ಲೆಗಳ ಅಭ್ಯರ್ಥಿಗಳನ್ನು ನೇಮಿಸಿಕೊಂಡಲ್ಲಿ ತರಬೇತಿ ಬಳಿಕ ಸ್ವಂತ ಜಿಲ್ಲೆಗೆ ವರ್ಗಾವಣೆಗೊಳ್ಳುತ್ತಾರೆ ಎಂದರು.ಹೀಗಾಗಿ ಕೆಪಿಟಿಸಿಎಲ್ ಮತ್ತು ಮೆಸ್ಕಾಂ ನೌಕರರ ತೊಂದರೆಯನ್ನು ಮಲೆನಾಡು ಮತ್ತು ವಿಶೇಷವಾಗಿ ಚಿಕ್ಕಮಗಳೂರು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದ ಕಾರಣ ಜಿಲ್ಲೆಯ ಸ್ಥಳೀಯರಿಗೆ ಮೊದಲು ಪ್ರಾಮುಖ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಚಟುವಟಿಕೆ ಮುಂದುವರಿದಿರುವ ಕಾರಣ ಇಂದಿಗೂ ವಿದ್ಯುತ್ ಕಂಬ ಹತ್ತಿ, ಇಳಿಯುವ ಶಿಬಿರಗಳು ಹಮ್ಮಿ ಕೊಂಡು ಕಾಲಹರಣ ಮಾಡಿ ದುಂದುವೆಚ್ಚ ಮಾಡುತ್ತಿರುವುದು ಸಮಂಜಸವಲ್ಲ. ಹಾಗಾಗಿ ಅವೈಜ್ಞಾನಿಕ ತರಬೇತಿ ಶಿಬಿರ ಕೈಬಿಟ್ಟು ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮೂಡಿಗೆರೆ ಉಪಾಧ್ಯಕ್ಷ ಎಂ.ಆರ್.ಕೃಷ್ಣ, ಸಲಹೆಗಾರ ರಂಜಿತ್, ಮುಖಂಡ ಅಪ್ಸರ್ ಅಹ್ಮದ್ ಇದ್ದರು.

8 ಕೆಸಿಕೆಎಂ 1ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಕೆಪಿಟಿಸಿಎಲ್‌ ಹೊರಗುತ್ತಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಉಪ್ಪಳಿ ಕೆ. ಭರತ್ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಜೆ.ಎಸ್.ಲೋಕೇಶ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.