ಗಣಿಗಾರಿಕೆಗೆ ಕೇಂದ್ರ ಸಚಿವ ಎಚ್‌ಡಿಕೆ ಅನುಮತಿ: ಹಿರೇಮಠ ಆಕ್ರೋಶ

| Published : Jun 19 2024, 01:05 AM IST

ಗಣಿಗಾರಿಕೆಗೆ ಕೇಂದ್ರ ಸಚಿವ ಎಚ್‌ಡಿಕೆ ಅನುಮತಿ: ಹಿರೇಮಠ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ತಾಲೂಕಿನ ಎರಡು ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲು ಕೆಐಒಸಿಎಲ್‌ ಹಾಗೂ ಎಸ್‌ಎಐಎಲ್‌ ಎಂಬೆರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆಯನ್ನು ರದ್ದುಪಡಿಸಬೇಕು.

ಧಾರವಾಡ:

ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿತ್ತು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಅರಣ್ಯ ಸಂರಕ್ಷಿಸುವ ಕೆಲಸ ಮಾಡಿತ್ತು. ಆ ಸಂರಕ್ಷಿತ ಅರಣ್ಯ ಈಗ ಮತ್ತೆ ಗಂಡಾಂತರಕ್ಕೆ ಸಿಲುಕಿದೆ. ಕೆಐಒಸಿಎಲ್ ಗಣಿಗಾರಿಕೆ ಸ್ವಾಮಿಮಲೈದಲ್ಲಿ ನಡೆಸಲಿದ್ದಾರೆ. ಅಲ್ಲಿ ಅಪರೂಪದ ಸಸ್ಯರಾಶಿ ಇದೆ. ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ದಿನವೇ ಈ ಗಣಿಗಾರಿಕೆಗೆ ಸಹಿ ಹಾಕಿದ್ದಾರೆ ಎಂದರು.

ಸಚಿವರು ಈ ಅನುಮೋದನೆಯನ್ನು ವಾಪಸ್ ಪಡೆಯಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ದೇಶದ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.

ಗುತ್ತಿಗೆ ರದ್ದುಪಡಿಸಿ:

ಸಂಡೂರು ತಾಲೂಕಿನ ಎರಡು ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲು ಕೆಐಒಸಿಎಲ್‌ ಹಾಗೂ ಎಸ್‌ಎಐಎಲ್‌ ಎಂಬೆರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿರುವ ಹಿರೇಮಠ, ಕೆಐಒಸಿಎಲ್‌ ಕಂಪನಿಗೆ 450 ಹೆಕ್ಟೇರ್‌ (1000 ಎಕರೆ) ಪ್ರದೇಶವನ್ನು ಸ್ವಾಮಿಮಲೈ ಭಾಗದಲ್ಲಿ ನೀಡಲಾಗಿದೆ. ಈ ಗಣಿ ಗುತ್ತಿಗೆಯಿಂದ ಬರೋಬ್ಬರಿ 99330 ಮರಗಳ ಮಾರಣ ಹೋಮ ಆಗಲಿವೆ. ಹಾಗೆಯೇ ಅದೇ ಪ್ರದೇಶದಲ್ಲಿ ಎಸ್‌ಎಐಎಲ್‌ ಕಂಪನಿಗೆ 60.70 ಹೆಕ್ಟೇರ್‌ (150 ಎಕರೆ) ಗಣಿ ಗುತ್ತಿಗೆ ನೀಡಿದ್ದು ಇದರಿಂದ 29440 ಮರಗಳನ್ನು ಕತ್ತರಿಸಲಾಗುತ್ತದೆ. ಈಗಾಗಲೇ ಈ ಗಣಿ ಗುತ್ತಿಗೆಗೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಪ್ರದೇಶಗಳು ದಟ್ಟವಾದ ಅರಣ್ಯ ಪ್ರದೇಶದಿಂದ ಕೂಡಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಪರಿಸರ ಹಾಳಾಗಿದ್ದು ಉಳಿದ ಪರಿಸರ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಗಣಿ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಎರಡು ಕಂಪನಿಗಳಿಗೆ ನೀಡಿರುವ ಗಣಿ ಗುತ್ತಿಗೆ ರದ್ದುಪಡಿಸಲು ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಅರಣ್ಯ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಹೋರಾಟಗಳು ನಡೆದಿವೆ. ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ಹಠ ಮುಂದುವರಿಸಿದರೆ ಕಾನೂನು ಹೋರಾಟ ಅನಿವಾರ್ಯ. ಈಗಾಗಲೇ ಸಮಾಜ ಪರಿವರ್ತನ ಸಮುದಾಯ, ಜನ ಸಂಗ್ರಾಮ ಪರಿಷತ್‌, ಪ್ರಾಕೃತಿಕ ಸಂಪನ್ಮೂಲಗಳ ರಾಷ್ಟ್ರೀಯ ರಕ್ಷಣಾ ಮಂಡಳಿ ಹಾಗೂ ಇತರೆ ಸಮಾನ ಮನಸ್ಕ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಮೂಲಕ ಗಣಿ ಗುತ್ತಿಗೆ ರದ್ದುಪಡಿಸುವುದಂತೂ ನಿಶ್ಚಿತ ಎಂದರು.

ಇಷ್ಟು ವರ್ಷ ಗಣಿಗಾರಿಕೆ ನಡೆದ ರಾಜ್ಯದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಪರಿಸರ ಪುನಶ್ಚೇತನ ಕಾರ್ಯ ಶುರು ಮಾಡಬೇಕಿದೆ. ಇದಕ್ಕಾಗಿ ₹ 25 ಸಾವಿರ ಕೋಟಿ ಹಣ ಇದ್ದು, ಕೆಎಂಇಆರ್‌ಸಿ ಸಂಸ್ಥೆ ಮೂಲಕ ಕಾರ್ಯವಾಗಬೇಕು. ಈ ಸಂಸ್ಥೆಯ ಅಧ್ಯಕ್ಷರಾದ ಶಾಲಿನಿ ರಜನೀಶ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೂಡಲೇ ಅವರನ್ನು ಬದಲಿಸಿ ಸೂಕ್ತ ವ್ಯಕ್ತಿಯನ್ನು ನೇಮಿಸಬೇಕು ಎಂದು ಹಿರೇಮಠ ಆಗ್ರಹಿಸಿದರು.