ಮೇಕೆದಾಟು ಯೋಜನೆಗೆ ತಮಿಳುನಾಡಿನ ಮೈತ್ರಿ ಪಕ್ಷ ಒಪ್ಪಿಸಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು

| Published : Jul 06 2025, 01:48 AM IST

ಮೇಕೆದಾಟು ಯೋಜನೆಗೆ ತಮಿಳುನಾಡಿನ ಮೈತ್ರಿ ಪಕ್ಷ ಒಪ್ಪಿಸಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ, ಕೃಷ್ಣಾ ವಿವಾದ ರಾಜ್ಯ ಸರ್ಕಾರಗಳು ಒಪ್ಪದೇ ಇರುವುದಕ್ಕೆ ಬಗೆಹರಿದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇದೆ. ಮೇಕೆದಾಟುವಿನಿಂದ ತಮಿಳುನಾಡಿಗೆ ಏನೂ ತೊಂದರೆ ಆಗಲ್ಲ.

ಹಾವೇರಿ: ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಇದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ. ನಾನು ಐದೇ ನಿಮಿಷದಲ್ಲಿ ಪ್ರಧಾನಮಂತ್ರಿಗಳ ಒಪ್ಪಿಗೆ ಕೊಡಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದರು.

ಜಿಲ್ಲೆಯ ಶಿಗ್ಗಾಂವಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಅಂತಾರಾಜ್ಯ ನದಿ ವಿವಾದಗಳಲ್ಲಿ ಸಂಬಂಧಿಸಿದ ರಾಜ್ಯ ಸರ್ಕಾರಗಳು ಒಪ್ಪದೇ ಇರುವುದೇ ಸಮಸ್ಯೆಯಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಸರಿಯಾಗಿಯೇ ಹೇಳಿದ್ದಾರೆ. ಮೇಕೆದಾಟು ವಿಚಾರವಾಗಿ ಇವರು ಪಾದಯಾತ್ರೆ ಮಾಡಿದ್ದರಲ್ಲವೇ? ಇವರಿಗೆ ಆಗ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.

ಕಾವೇರಿ, ಕೃಷ್ಣಾ ವಿವಾದ ರಾಜ್ಯ ಸರ್ಕಾರಗಳು ಒಪ್ಪದೇ ಇರುವುದಕ್ಕೆ ಬಗೆಹರಿದಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಇದೆ. ಮೇಕೆದಾಟುವಿನಿಂದ ತಮಿಳುನಾಡಿಗೆ ಏನೂ ತೊಂದರೆ ಆಗಲ್ಲ. ನಾವು ನೀರು ತಡೆದು ಮತ್ತೆ ಅವರಿಗೇ ಬಿಡುತ್ತೇವೆ. ಡಿಎಂಕೆ ಸರ್ಕಾರದಲ್ಲಿ ಕಾಂಗ್ರೆಸ್ ಮಂತ್ರಿಗಳಿದ್ದು, ಅವರು ಸಹಕಾರ ಕೊಡಬೇಕು. ಎರಡೂ ರಾಜ್ಯ ಸರ್ಕಾರಗಳು ಒಪ್ಪಬೇಕು. ಟ್ರಿಬ್ಯುನಲ್ ಕಾನೂನಿನಲ್ಲಿ ಬದಲಾವಣೆ ತಂದಿದ್ದೇವೆ. ಒಂದೇ ಟ್ರಿಬ್ಯುನಲ್ ಮಾಡಿ ಬೆಂಚ್‌ಗಳನ್ನು ಮಾಡಿ ಕಾಲಮಿತಿಯಲ್ಲಿ ಆಗುವಂತೆ ಕಾನೂನು ಮಾಡಿದ್ದೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ವಿಚಾರದಲ್ಲಿ ಗೊಂದಲ ಇಲ್ಲ. ಇಡೀ ದೇಶದಲ್ಲಿ ಸದಸ್ಯತ್ವ ಅಭಿಯಾನ ನಡೆದಿದೆ. ಇದನ್ನ ಸಂಘಟನಾ ಪರ್ವವೆಂದು ಕರೆಯುತ್ತೇವೆ. ಬೂತ್ ಮಟ್ಟದಿಂದ ಮಂಡಲ, ಮಂಡಲದಿಂದ ಜಿಲ್ಲೆ, ಜಿಲ್ಲೆಯಂದ ರಾಜ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದಂತೆ ಕೇಳುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಗೆ ಸುಂಕ ಅಂದರೆ ಏನು, ನೀತಿ ಅಂದರೇನು ಗೊತ್ತಿಲ್ಲ. ಬರೆದು ಕೊಟ್ಟದ್ದನ್ನು ಓದುತ್ತಾರೆ. ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ. ಅವರಿಂದ ಏನು ನಿರೀಕ್ಷೆ ಮಾಡಲು ಆಗುತ್ತದೆ ಎಂದರು.

ರಾಹುಲ್ ಗಾಂಧಿಗೆ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಏನೂ ಗೊತ್ತಿಲ್ಲ. ಅವರ ಮಾತು ಗಂಭೀರವಾಗಿ ಪರಿಗಣಿಸಲ್ಲ ಎಂದರು.