ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಹು-ಧಾ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ನಗರದ ವಿವಿಧೆಡೆ ಬೃಹತ್‌ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶ್ರೀ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಬೆಡ್‌ಶೀಟ್‌ ವಿತರಣೆ ಸೇರಿದಂತೆ ಅನೇಕ ಬಗೆಯ ಸೇವಾ ಕಾರ್ಯಕ್ರಮ ನಡೆದವು.

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜನ್ಮದಿನದ ಅಂಗವಾಗಿ ಹು-ಧಾ ಮಹಾನಗರ ಹಾಗೂ ಗ್ರಾಮೀಣ ಜಿಲ್ಲಾ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ನಗರದ ವಿವಿಧೆಡೆ ಬೃಹತ್‌ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶ್ರೀ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು, ಬೆಡ್‌ಶೀಟ್‌ ವಿತರಣೆ ಸೇರಿದಂತೆ ಅನೇಕ ಬಗೆಯ ಸೇವಾ ಕಾರ್ಯಕ್ರಮ ನಡೆದವು. ವಿಶೇಷವಾಗಿ 640 ಪುರಾತನ ದೇವಸ್ಥಾನಗಳ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿ ಪೂಜೆ ಜತೆಗೆ ಸಂಜೆ ಕಾರ್ತಿಕ ದೀಪೋತ್ಸವ ಆಚರಿಸಲಾಯಿತು. ಅಲ್ಲದೇ, ಸ್ವಚ್ಛಗೊಳಿಸಿದ ದೇವಸ್ಥಾನಗಳ ಆವರಣದಲ್ಲಿ ಭಗವಾ ಧ್ವಜಾರೋಹಣ ನೆರವೇರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು. ಸಂಚಾರಿ ವಾಹನಗಳ ಮೂಲಕ ಕ್ಷೇತ್ರದ ವಿವಿಧ ಭಾಗಗಳಲ್ಲಿ ಉಚಿತವಾಗಿ ಪೌಷ್ಟಿಕ ಆಹಾರ ವಿತರಣೆ, ಮಹಿಳಾ ಸಬಲೀಕರಣ ದೃಷ್ಟಿಯಿಂದ ಸಂಚಾರಿ ವಾಹನದ ಮೂಲಕ ಜಿಲ್ಲೆಯ ಹಿಂದುಳಿದ ಭಾಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಮತ್ತು ಫ್ಯಾಷನ್‌ ಡಿಸೈನಿಂಗ್‌ ತರಬೇತಿ ಕಾರ್ಯಕ್ರಮ ನಡೆಯಿತು.ಹಳೇಹುಬ್ಬಳ್ಳಿಯ ರಣದಮ್ಮ ಕಾಲನಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಬಿಜೆಪಿ ಘಟಕದಿಂದ ಬಾಲಾಜಿ ಆಸ್ಪತ್ರೆಯ ನೇತೃತ್ವದಲ್ಲಿ ಬೃಹತ್‌ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ನಡೆಯಿತು. ಮೇಯರ್‌ ದುರ್ಗಮ್ಮ ಬಿಜವಾಡ ಶಿಬಿರ ಉದ್ಘಾಟಿಸಿದರು. ನೂರಾರು ಜನರು ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ ಮಾಡಿಸಿಕೊಂಡರು. ಮಾಜಿ ಶಾಸಕ ಅಶೋಕ ಕಾಟವೆ, ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬಾಲಾಜಿ ಆಸ್ಪತ್ರೆಯ ಡಾ. ಕ್ರಾಂತಿಕಿರಣ, ಮಂಜುನಾಥ ಕಾಟಕರ, ಲಕ್ಷ್ಮೀಕಾಂತ ಘೋಡಕೆ ಇತರರಿದ್ದರು.

ಎಪಿಎಂಸಿಯಲ್ಲಿ ಆರೋಗ್ಯ ಶಿಬಿರ:ಇಲ್ಲಿನ ಎಪಿಎಂಸಿ ಆವರಣದಲ್ಲಿ ಧಾರವಾಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಹಾನ್‌ ಆಸ್ಪತ್ರೆ, ಹುಬ್ಬಳ್ಳಿ ಕೋ ಆಪ್‌ರೇಟಿವ್‌ ಆಸ್ಪತ್ರೆ, ವಿ ಕೇರ್‌ ಆಸ್ಪತ್ರೆ, ಶ್ರೀ ಗುರು ಮಹಿಪತಿರಾಜ ನೇತ್ರ ಸೇವಾ ಸಂಸ್ಥೆ ಮತ್ತು ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ನಡೆದ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹು-ಧಾ ಸೆಂಟ್ರಲ್‌ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿದರು. ಕೆಎಲ್‌ಇ ಸಂಸ್ಥೆ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಲ್ಲಿಕಾರ್ಜುನ ಗುಂಡೂರ ಇತರರು ಇದ್ದರು.

ಈ ವೇಳೆ ಭೈರಿದೇವರಕೊಪ್ಪ, ನವನಗರ, ಎಪಿಎಂಸಿ ಹಾಗೂ ಸುತ್ತಲಿನ ಪ್ರದೇಶ ಜನರು ಶಿಬಿರದ ಲಾಭ ಪಡೆದುಕೊಂಡರು.