ದಾಸ ಸಾಹಿತ್ಯವು ಸಾಮಾನ್ಯ ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜೀವನಾಧಾರಿತ ಸಾಹಿತ್ಯವಾಗಿದೆ.

ಹೊಸಪೇಟೆ: ದಾಸ ಸಾಹಿತ್ಯವು ಸಾಮಾನ್ಯ ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜೀವನಾಧಾರಿತ ಸಾಹಿತ್ಯವಾಗಿದೆ. ಸಮಾಜಕ್ಕೆ ಮಾರ್ಗದರ್ಶಕವಾಗುತ್ತದೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ಎರಡು ಕಣ್ಣುಗಳಿಗೆ ಹೋಲಿಸಿ, ತುಂಗಭದ್ರಾ ನದಿಯ ದಂಡೆಯ ಪ್ರದೇಶದಲ್ಲಿ ದಾಸ ಸಾಹಿತ್ಯವು ವಿಶಿಷ್ಟವಾಗಿ ಬೆಳವಣಿಗೆಯಾಗಿದೆ ಎಂದು ಹುಬ್ಬಳ್ಳಿಯ ದಾಸಸಾಹಿತ್ಯ ಸಂಶೋಧಕ ಇಂ. ಭೀಮಸೇನ ಬಡಿಗೇರ ಅವರು ಅಭಿಪ್ರಾಯಪಟ್ಟರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಂದರದಾಸ ಅಧ್ಯಯನ ಪೀಠ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ದಾಸ ಸಾಹಿತ್ಯ: ಪಠ್ಯ ಮತ್ತು ಪರಿಸರ ಶೋಧ ವಿಷಯದ ಕುರಿತು ಮಾತನಾಡಿದರು.

ಪುರಂದರದಾಸರು ತಮ್ಮ ಕೀರ್ತನೆಗಳಲ್ಲಿ ವಿಷಯವನ್ನು ಮೃದುವಾಗಿ ಅಭಿವ್ಯಕ್ತಿಸಿದರೆ, ಕನಕದಾಸರು ಕೆಲವು ಸಂದರ್ಭಗಳಲ್ಲಿ ನೇರ ಮತ್ತು ಸ್ಪಷ್ಟವಾದ ಮಾತುಗಳನ್ನು ಹೇಳಿದ್ದಾರೆ. ವಿಷಯವನ್ನು ನೇರವಾಗಿ, ಸ್ಪಷ್ಟವಾಗಿ ಹೇಳುವ ಶೈಲಿಯೇ ದಾಸ ಸಾಹಿತ್ಯದ ವೈಶಿಷ್ಟ್ಯವೆಂದು ಅವರು ವಿವರಿಸಿದರು.

ದಾಸ ದೀಕ್ಷೆಯನ್ನು ಯಾರೂ ಬೇಕಾದರೂ ಸ್ವೀಕರಿಸಬಹುದಾಗಿದೆ. ಅದರಲ್ಲಿ ಯಾವುದೇ ಕುಲ-ಮತ, ಭೇದ ಇರಲಿಲ್ಲ. ಆದರೆ ಅದಕ್ಕಾಗಿ ಅರ್ಹತೆ ಮುಖ್ಯವಾಗಿತ್ತು. ಎಲ್ಲ ವರ್ಗದ ಜನರನ್ನು ಮನದಲ್ಲಿಟ್ಟುಕೊಂಡು ದಾಸ ಸಾಹಿತ್ಯವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

ಬ್ರಿಟಿಷರು ನಮ್ಮನ್ನು ಆಳಿದರೂ ನಮ್ಮ ಸಾಹಿತ್ಯ ಮತ್ತು ಪರಂಪರೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಸಂಶೋಧನಾ ಕ್ಷೇತ್ರದಲ್ಲಿ ಭಾಷಾ ಜ್ಞಾನ ಮತ್ತು ಸಂಶೋಧಕರ ನಡವಳಿಕೆ ಪ್ರಮುಖವಾಗಿದೆ. ದಾಸ ಸಾಹಿತ್ಯದ ಕುರಿತು ಸಮಗ್ರವಾದ ಅಧ್ಯಯನ ಇನ್ನಷ್ಟು ನಡೆಯಬೇಕಿದೆ ಎಂದು ಅವರು ಸಂಶೋಧನಾರ್ಥಿಗಳಿಗೆ ಸಲಹೆ ನೀಡಿದರು.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಸ್ತಪ್ರತಿಗಳ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಹೊರಗಡೆಯವರೇ ಹೆಚ್ಚು ಕೆಲಸ ಮಾಡುತ್ತಿರುವುದನ್ನು ಗಮನಿಸಬಹುದು. ಜನರಲ್ಲಿ ಇರುವ ಮೌಢ್ಯತೆಗಳಿಂದ ಅನೇಕ ಹಸ್ತಪ್ರತಿಗಳು ನಾಶವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.

ಕ್ಷೇತ್ರ ಕಾರ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ನೀಡುತ್ತಿರುವ ಸಹಕಾರವನ್ನು ಅವರು ನೆನಪಿಸಿಕೊಂಡು, ಸಂಶೋಧನಾರ್ಥಿಗಳು ಸಂಗ್ರಹ ಕಾರ್ಯಕ್ಕೆ ತೆರಳುವಾಗ ಜನರಲ್ಲಿ ನಂಬಿಕೆ ಮೂಡುವಂತೆ ನಡೆದುಕೊಳ್ಳಬೇಕು. ಅದರಿಂದ ಸಂಶೋಧನೆಗೆ ಸುಗಮ ದಾರಿ ಸಿಗುತ್ತದೆ ಎಂದು ತಿಳಿಸಿದರು.

ದಾಸರು ಸಂಚಾರದ ಮೂಲಕ ಊರನ್ನು ತೊರೆದಾಗ ಅವರ ಕುಟುಂಬಗಳ ಸ್ಥಿತಿ ಏನಾಯಿತೆಂಬ ಪ್ರಶ್ನೆಯನ್ನು ಎತ್ತಿ, ಆ ವಿಷಯದ ಮೇಲೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಈ ವೇಳೆ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್‌.ಎಸ್‌. ಅಂಗಡಿ, ಪುರಂದರದಾಸ ಅಧ್ಯಯನ ಪೀಠದ ಸಂಚಾಲಕ ಡಾ. ಎಸ್.ಆರ್. ಚನ್ನವೀರಪ್ಪಸೇರಿದಂತೆ ವಿವಿಧ ವಿಭಾಗಗಳ ಡೀನರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಡಾ.ಎಸ್.ಆರ್. ಚನ್ನವೀರಪ್ಪ ಸ್ವಾಗತಿಸಿದರು. ಪ್ರವೀಣ್ ನಿರೂಪಿಸಿದರು.