ಧ್ವಜಾರೋಹಣ ಮೂಲಕ ವಿಶಿಷ್ಟ ಮತದಾನ ಜಾಗೃತಿ

| Published : Apr 22 2024, 02:03 AM IST

ಸಾರಾಂಶ

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಭುವನೇಶ್ವರಿ ವೃತ್ತದಲ್ಲಿರುವ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿರುವ ಮತಗಟ್ಟೆಯಲ್ಲಿ ಮತದಾನದ ಧ್ವಜಾರೋಹಣ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ ಚಾಮರಾಜನಗರ

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ನಗರದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣದ ಭುವನೇಶ್ವರಿ ವೃತ್ತದಲ್ಲಿರುವ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿರುವ ಮತಗಟ್ಟೆಯಲ್ಲಿ ಮತದಾನದ ಧ್ವಜಾರೋಹಣ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.

ನಾಗರಿಕರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಯನ್ನು ಪರಿಚಯಿಸುವ ಸಲುವಾಗಿ ಪ್ರತಿ ಮತಗಟ್ಟೆಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿಶೇಷ ಕಾಳಜಿ ವಹಿಸಿ ಆಕರ್ಷಕವಾಗಿ ವಿನ್ಯಾಸಗೊಳಿಸಿ ಮುದ್ರಿಸಲಾಗಿರುವ ಶ್ವೇತವರ್ಣದ ಧ್ವಜಾರೋಹಣವನ್ನು ಪೇಟೆ ಪ್ರೈಮರಿ ಶಾಲೆಯ ಮತಗಟ್ಟೆ ಅಧಿಕಾರಿ ನೇರವೇರಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಲಕ್ಷ್ಮಿ ಅವರು ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ‘ನಮ್ಮ ನಡೆ ಮತಗಟ್ಟೆ ಕಡೆ’ ಅಡಿ ವೈವಿಧ್ಯಮಯ ಮತದಾನ ಅರಿವು ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏ.26ರಂದು ನಡೆಯಲಿರುವ ಮತದಾನವನ್ನು ಯಶಸ್ವಿಗೊಳಿಸಿ ಚುನಾವಣೆಯನ್ನು ಹಬ್ಬದ ಮಾದರಿಯಲ್ಲಿ ಆಚರಿಸಬೇಕು ಎಂದರು. ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಸಂಬಂಧ ರಾಜ್ಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಧ್ವಜಾರೋಹಣ ಮತ್ತು ವಾಕಥಾನ್ ನಡಿಗೆ ಏರ್ಪಡಿಸಲಾಗಿದೆ.

ಜಿಲ್ಲೆಯಲ್ಲಿ ಮತದಾನಕ್ಕಾಗಿ ತೆರೆಯಲಾಗಿರುವ 983 ಮತಗಟ್ಟೆಗಳಲ್ಲಿ ಧ್ವಜಾರೋಹಣ ಹಾಗೂ ಆಯಾ ಗ್ರಾಮದ ಪ್ರಮುಖ ಸ್ಥಳದಿಂದ ಮತಗಟ್ಟೆವರೆಗೆ ವಾಕಥಾನ್ ನಡಿಗೆ ನಡೆದಿದೆ. ಶ್ವೇತವರ್ಣದ ಧ್ವಜದಲ್ಲಿ ಚುನಾವಣಾ ಲಾಂಛನ, ಮತದಾನದ ದಿನಾಂಕ ಹಾಗೂ ಸಮಯವನ್ನು ಮುದ್ರಿಸಲಾಗಿದೆ. ‘ಚುನಾವಣಾ ಪರ್ವ-ದೇಶದ ಗರ್ವ’ ದ ಮತದಾನದ ಘೋಷವಾಕ್ಯವಿದ್ದು, ಧ್ವಜವು ಮತದಾನದ ದಿನದವರೆಗೂ ಮತಗಟ್ಟೆಯ ಮುಭಾಂಗದಲ್ಲಿ ಹಾರಲಿದೆ. ನಾಗರಿಕರಿಗೆ ಮತದಾನದ ಜಾಗೃತಿ ಮೂಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಸಾರ್ವಜನಿಕರು, ಯುವಜನತೆ, ವಿಶೇಷಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಏ.26ರಂದು ಮತಗಟ್ಟೆಗಳಿಗೆ ಆಗಮಿಸಿ ಮತ ಹಾಕುವಂತೆ ಪ್ರೇರೇಪಿಸಲಾಗುತ್ತಿದೆ. ಮತದಾನ ಪ್ರಕ್ರಿಯೆಯಲ್ಲಿ ಗ್ರಾಮೀಣ ಜನರು ಮುಂಚೂಣಿಯಲ್ಲಿದ್ದು, ನಗರ ಪ್ರದೇಶದ ಜನರು ಸಹ ಮತಗಟ್ಟೆಗೆ ಬಂದು ಮತ ಚಲಾಯಿಸಲು ಮುಂದಾಗಬೇಕು. ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು. ನೈತಿಕ ಮತದಾನವನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ. ಲಕ್ಷ್ಮಿ ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಅವರು ಮತದಾನದ ಪ್ರತಿಜ್ಞಾವಿಧಿ ಬೋಧಿಸಿ ‘ಚುನಾವಣಾ ಪರ್ವ ದೇಶದ ಗರ್ವ ಮತದಾನದ ಘೋಷವಾಕ್ಯ ಮೊಳಗಿಸಿ ಮತದಾನದ ಅರಿವು ಮೂಡಿಸಿದರು. ತಾಪಂ ಇಒ ಕೃಷ್ಣಪ್ಪ, ಚುನಾವಣಾ ತರಬೇತುದಾರ ಲಿಂಗರಾಜೇ ಅರಸ್, ನಗರಸಭೆ ಕಂದಾಯ ನಿರೀಕ್ಷಕ ಶರವಣ, ಸಮುದಾಯ ಸಂಘಟನಾ ಅಧಿಕಾರಿ ವೆಂಕಟ್ ನಾಯಕ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಶಾಲೆಯ ಕರಾಟೆ ತರಬೇತಿ ನಿರತ ಮಕ್ಕಳು, ಇತರರು ಇದ್ದರು.