ಸಾರಾಂಶ
ದಾಸರಹಳ್ಳಿ : ಕ್ಷೇತ್ರಕ್ಕೆ ಸರಿಯಾಗಿ ನೀರು ಬಿಡದಿದ್ದರೆ ಹೆಗ್ಗನಹಳ್ಳಿಯಲ್ಲಿರುವ ಬೃಹತ್ ಜಲ ಕೇಂದ್ರಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಶಾಸಕ ಎಸ್.ಮುನಿರಾಜು ಅವರು ಜಲಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿರುವ ನೆಲಮಟ್ಟದ ಅತೀ ದೊಡ್ಡ ಜಲಸಂಗ್ರಾಹಾರಕ್ಕೆ ಶಾಸಕ ಎಸ್.ಮುನಿರಾಜು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮುನಿರಾಜು ಮಾತನಾಡಿ, ಮುಂದೆ ಸರಿಯಾಗಿ ನೀರು ಪೂರೈಕೆ ಮಾಡದಿದ್ದರೆ ನೀರಿನ ಬೃಹತ್ ನೀರಿನ ಘಟಕಕ್ಕೆ ಬೀಗ ಹಾಕಿ ಮುತ್ತಿಗೆ ಹಾಕಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನು ಅಧಿಕಾರಿಗಳು ಸಮರ್ಪಕವಾಗಿ ಶಾಸಕರ ಪ್ರಶ್ನೆಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಶಾಸಕರು ಗರಂ ಆದ ಘಟನೆಯೂ ನಡೆಯಿತು.
ಬೆಂಗಳೂರು ಉತ್ತರ ಭಾಗದ ಮುಖ್ಯ ಅಭಿಯಂತರರಾಗಿರುವ ಸುರೇಶ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಗ್ಗನಹಳ್ಳಿ ವಾರ್ಡ್ ನಂ.71 ರಲ್ಲಿ ಇರುವ 48 ಎಂ.ಎಲ್.ಡಿ ಜಲಸಂಗ್ರಹಾರಕ್ಕೆ ಬರಬೇಕಾದ ನೀರನ್ನು ಸಿಂಗಾಪುರ ಜಿ.ಎಲ್.ಆರ್‌ಗೆ ಸರಬರಾಜು ಮಾಡಿಕೊಂಡಿದ್ದಾರೆ. ಇದರಿಂದಾಗಿ ಹೆಗ್ಗನಹಳ್ಳಿ ಜಿ.ಎಲ್.ಆರ್ ಟ್ಯಾಂಕ್ ಅವಲಂಬಿತ ಜನತೆಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ದೂರಿದರು.
ಪ್ರಧಾನ ಅಭಿಯಂತರರ ಬದಲು ಬೇರೊಬ್ಬ ಸಮಾನ ಮನಸ್ಕ ಪ್ರಧಾನ ಅಭಿಯಂತರರನ್ನು ನೇಮಿಸಿ ಈ ಭಾಗದ ಜನರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಜಲಮಂಡಳಿಯ ಅಧ್ಯಕ್ಷರಿಗೆ ಪತ್ರದ ಮುಖೇನ ಆಗ್ರಹಿಸುವುದಾಗಿ ಹೇಳಿದರು, ಒಂದು ವೇಳೆ ವಾರದೊಳಗಾಗಿ ಸರಿಪಡಿಸದಿದ್ದರೆ ಸಾರ್ವಜನಿಕರೊಂದಿಗೆ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು ಎಂದರು.
ಮುಖ್ಯ ಎಂಜಿನಿಯರ್ ಪರಮೇಶ್ವರಪ್ಪ ಮಾತನಾಡಿ, ಶಾಸಕರು ಕ್ಷೇತ್ರದ ನೀರಿನ ಸಮಸ್ಯೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾಸಕರ ಅನುಮಾನ ಬಗೆಹರಿಸಲು ಅವರ ಸಮ್ಮುಖದಲ್ಲಿ ಪರಿಶೀಲಿಸಲಾಗಿದೆ. ಕೆಲವೊಮ್ಮೆ ನೀರಿನ ಸಾಂದ್ರತೆ ಕಡಿಮೆ ಆದಾಗ ತೊಂದರೆಯಾಗುತ್ತದೆ. ಕೆಲವೇ ದಿನಗಳಲ್ಲಿ 5ನೇ ಹಂತದ ಕಾವೇರಿ ನೀರು ಅನುಷ್ಠಾನಗೊಳ್ಳಲಿದೆ. ದಾಸರಹಳ್ಳಿಗೆ ಕಡಿಮೆ ಆಗಿರುವ 20 ಎಂಎಲ್‌ಡಿ ನೀರನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಕ್ಸಿಕ್ಯೂಟಿವ್ ಎಂಜಿನಿಯರ್‌ಗಳಾದ ಮಿರಗಂಜಿ ಮಂಜುನಾಥ್, ಹರಿನಾಥ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಬಿ.ನಾಗರಾಜು, ರಾಮ್ ಕುಮಾರ್, ಸ್ಥಳೀಯ ಮುಖಂಡರು, ಸಾರ್ವಜನಿಕರು ಇದ್ದರು.
ನಮಗೆ ಬರಬೇಕಿದ್ದ 20 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಯಲಹಂಕಕ್ಕೆ ಹೋಗುತ್ತಿದೆ. ಇದರಿಂದ ದಾಸರಹಳ್ಳಿಗೆ ಬರಬೇಕಿದ್ದ 20 ಎಂಎಲ್‌ಡಿ ನೀರು ಖೋತಾ ಅಗಿದೆ. ಇದರಿಂದ ನಮ್ಮ ಕ್ಷೇತ್ರಕ್ಕೆ ನೀರಿನ ಸಮಸ್ಯೆ ಆಗಿದೆ.
-ಎಸ್.ಮುನಿರಾಜು, ಶಾಸಕ.