ಎಚ್‌ಐವಿ ಕೊನೆಗೊಳಿಸಲು ಒಗ್ಗಟ್ಟಾಗಿ ಮುಂದಾಗಿ: ಡಾ. ಸೂಗರೆಡ್ಡಿ

| Published : Dec 23 2023, 01:46 AM IST

ಎಚ್‌ಐವಿ ಕೊನೆಗೊಳಿಸಲು ಒಗ್ಗಟ್ಟಾಗಿ ಮುಂದಾಗಿ: ಡಾ. ಸೂಗರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ, ವಿವೇಕ್ ಪೋಷಕರ ಕಾರ್ಯಾಗಾರದಡಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಕುರಿತ ಉಪನ್ಯಾಸದಲ್ಲಿ ಡಾ.ಸೂಗರೆಡ್ಡಿ ಸಲಹೆ

ಕನ್ನಡಪ್ರಭ ವಾರ್ತೆ ದಾವಣಗೆರೆ

2022 ರ ಅಂಕಿ ಅಂಶಗಳ ಪ್ರಕಾರ ವಿಶ್ವದಲ್ಲಿ 3.9 ಕೋಟಿ ಜನರು ಎಚ್‌ಐವಿ ಸೋಂಕಿತರಿದ್ದು, ಭಾರತದಲ್ಲಿ 24 ಲಕ್ಷ ಜನರು ಎಚ್‌ಐವಿಯೊಂದಿಗೆ ಬದುಕು ನಡೆಸುತ್ತಿದ್ದಾರೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜು ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಸೂಗರೆಡ್ಡಿ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ, ವಿವೇಕ್ ಪೋಷಕರ ಕಾರ್ಯಾಗಾರದಡಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕುರಿತು ಮಾತನಾಡಿದ ಅವರು, ದೇಶದ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಕಂಡುಬಂದಿವೆ. 2021ರಲ್ಲಿ, ಭಾರತದಲ್ಲಿ ಹೊಸ ಎಚ್‌ಐವಿ ಪ್ರಕರಣಗಳ ಸಂಖ್ಯೆ ಸುಮಾರು 62.97 ಸಾವಿರ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಎಚ್‌ಐವಿ ರೋಗಕ್ಕೆ ‘ಎಆರ್‌ಟಿ’ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಜನರ ಸಂಖ್ಯೆ 4617 ಎಂದು ಅಂದಾಜಿಸಲಾಗಿದೆ. ಅವರಲ್ಲಿ 4371 ವಯಸ್ಕರು ಮತ್ತು 246 ಮಕ್ಕಳು ಹಾಗೂ ''ಪೂರ್ವ-ಎಆರ್‌ಟಿ'' ಕೌನ್ಸೆಲಿಂಗ್ ಪಡೆಯುತ್ತಿರುವ ಎಚ್‌ಐವಿ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 10945 ಎಂದು ಅಂದಾಜಿಸಲಾಗಿದೆ, ಅದರಲ್ಲಿ 10450 ವಯಸ್ಕರು ಮತ್ತು 495 ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು.

ಡಿ.1 ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಏಡ್ಸ್ ದಿನಾಚರಣೆ ಆಚರಿಸುತ್ತದೆ. 2023ರ ಧ್ಯೇಯ ವಾಕ್ಯ ''ಸಮುದಾಯಗಳು ಮುನ್ನಡೆಸಲಿ'' ಅಂದರೆ ಎಚ್‌ಐವಿ ಒಂದು ಜಾಗತಿಕ ಆರೋಗ್ಯ ಸವಾಲಾದ್ದರಿಂದ ಸಮುದಾಯದ ಜನರು ಎಚ್‌ಐವಿ ಕೊನೆಗೊಳಿಸಲು ಒಗ್ಗಟ್ಟಾಗಿ ಮುಂದಾಗಬೇಕು ಎಂದರ್ಥವಾಗಿದೆ ಎಂದರು.

ಸೋಂಕಿತ ವ್ಯಕ್ತಿಯ ಪರೀಕ್ಷಿಸದ ರಕ್ತದಾನ ಪಡೆಯುವುದರಿಂದ, ಸೋಂಕಿತ ಮಾದಕ ವ್ಯಸನಿಗಳು ಬಳಸಿದ ಸೂಜಿ, ಸಿರಿಂಜ್ ಅಥವಾ ಇತರೆ ಯಾವುದೇ ಚೂಪಾದ ವಸ್ತುಗಳನ್ನು ಬಳಸುವುದರಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆ, ಹೆರಿಗೆ ಮತ್ತು ಮೊಲೆಯುಣಿಸುವ ಸಂದರ್ಭಗಳಲ್ಲಿ ಹರಡುವ ಅಪಾಯವಿದೆ. ಹಾಗೂ ಅಸುರಕ್ಷಿತ ಸೂಜಿಗಳಿಂದ ಹಚ್ಚೆ ಹಾಕಿಸಿಕೊಳ್ಳುವ ಸಮಯದಲ್ಲೂ ಏಡ್ಸ್ ಹರಡುವ ಅಪಾಯವಿದೆ ಎಂದು ಎಚ್ ಐವಿ ಹರಡುವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳಿದ್ದರು.