ವಿವಿಧತೆಯಲ್ಲಿ ಏಕತೆ ಭಾರತದ ದೊಡ್ಡ ಶಕ್ತಿ

| Published : Jan 27 2024, 01:17 AM IST

ಸಾರಾಂಶ

ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ನಡೆಯಿತು. ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ವಿವಿಧತೆಯಲ್ಲಿ ಏಕತೆ ಭಾರತದ ಅತಿ ದೊಡ್ಡ ಶಕ್ತಿಯಾಗಿದೆ ಎಂದರು.

ಬ್ಯಾಡಗಿ: ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡಶಕ್ತಿಯಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಬರೆದ ಭಾರತದ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಶುಕ್ರವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿ ಪ್ರತಿಪಾದಿಸುವ ದೇಶ ನಮ್ಮದಾಗಿದೆ. ಭಾರತ ಆಡಳಿತಾತ್ಮಕ ನಿರ್ವಹಣೆಗೆ ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತಿವೆ, ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಹುಟ್ಟಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ ಎಂದರು.

ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ‍್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಸ್ವಾತಂತ್ರ‍್ಯ ಭಾರತದ ಸಂವಿಧಾನದಲ್ಲಿ ಇರುವ 5 ಪ್ರಮುಖ ಮೌಲ್ಯಗಳಾಗಿವೆ, ಭಾರತದ ಗಣರಾಜ್ಯ ಮಹೋತ್ಸವವನ್ನು ಅರ್ಥಪೂರ್ಣವಾಗಿ ನಾವು ನೀವೆಲ್ಲರೂ ಆಚರಿಸೋಣ ಎಂದರು.

ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಮಾತನಾಡಿ, ಈ ದಿನದಂದು ಇಡೀ ದೇಶವೇ ಸಂಭ್ರಮಿಸುತ್ತದೆ. ಈ ದಿನವು ದೇಶ ಸ್ವಾತಂತ್ರ‍್ಯೋತ್ತರ ಗಣರಾಜ್ಯ ದೇಶವಾದ ಐತಿಹಾಸಿಕ ದಿನವಾಗಿದೆ ಮತ್ತು ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಮ್ಮಲ್ಲಿ ದೇಶಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಹತ್ವದ ದಿನವಾಗಿದೆ ಎಂದರು.

ಭಾರತದ ಸಂವಿಧಾನ ಅಂಗೀಕಾರಗೊಂಡ ದಿನವಿದು, ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆಯೇ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು, ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳು ಸಹ ಇವೆ. ದೇಶದ ಸಂಪನ್ಮೂಲಗಳನ್ನು ಕಾಪಾಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಗೌರವಿಸುವುದು, ಸರ್ಕಾರದ ನಿಯಮಗಳು, ಸಂವಿಧಾನದ ಆದರ್ಶಗಳನ್ನು ಪಾಲಿಸುವುದು ಹಾಗೂ ಇತರ ಜವಾಬ್ದಾರಿಗಳು ನಮ್ಮ ಮೇಲೆ ಇವೆ ಎಂದರು.

ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ದಾನಪ್ಪ ಚೂರಿ, ಲಕ್ಷ್ಮೀ ಜಿಂಗಾಡೆ, ಬೀರಣ್ಣ ಬಣಕಾರ, ಸುರೇಶ್ ಅಸಾದಿ, ಮುರಿಗೆಪ್ಪ ಶೆಟ್ಟರ್, ರಾಮಣ್ಣ ಕೋಡಿಹಳ್ಳಿ, ಸುಭಾಸ್ ಮಾಳಗಿ, ವಿನಯ್ ಹಿರೇಮಠ, ಮಂಜುನಾಥ ಭೋವಿ, ಅಧಿಕಾರಿಗಳಾದ ಕೆ.ಎಂ. ಮಲ್ಲಿಕಾರ್ಜುನ, ಸಿಪಿಐ ಮಾಲತೇಶ ಲಂಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಮುಖ್ಯಾಧಿಕಾರಿ ವಿನಯಕುಮಾರ್ ಹೊಳಿಯಪ್ಪಗೋಳ ಸೇರಿದಂತೆ ಇತರರಿದ್ದರು.