ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರಶಿಕ್ಷಣಾರ್ಥಿಗಳು ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಕಾಪಾಡಿಕೊಂಡು ಅನೇಕತೆಯಲ್ಲಿ ಏಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಭಾಪತಿ, ಮಾಜಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಭಾರತೀಯ ಜನತಾ ಪಾರ್ಟಿ ವತಿಯಿಂದ ಇಲ್ಲಿಯ ಕೊಡವ ಸಮಾಜದಲ್ಲಿ ಆಯೋಜಿಸಲಾದ ಮಡಿಕೇರಿ ಗ್ರಾಮಾಂತರ ಮಂಡಲ ಮಟ್ಟದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ-2026 ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಭಾರತ ವೈವಿಧ್ಯತೆಯ ದೇಶ. ಜಾತಿ ಸಮಾಜದ ಬಗ್ಗೆ ಅಭಿಮಾನವಿರಬೇಕು. ಅಂದಾಭಿಮಾನ ಇರಬಾರದು ಎಂದ ಅವರು, ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಇತರರು ಅನುಸರಿಸುವಂತಾಗಬೇಕು. ಪ್ರತಿಯೊಬ್ಬರೂ ಸ್ವಾಭಿಮಾನಿ ಸ್ವಾವಲಂಬಿಯಾಗಿ ಬದುಕುವುದರೊಂದಿಗೆ ಸಮಾಜದಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಸಮಾಜದ ಅಭಿವೃದ್ಧಿಗೆ ಒತ್ತು ಕೊಡಿ. ಅಭ್ಯಾಸ ವರ್ಗದಲ್ಲಿ ಸಮಸ್ಯೆಗಳನ್ನು ಬದಿಗೊತ್ತಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ದೇಶ ಮೊದಲು ನಂತರ ಪಕ್ಷ ಎಂಬುದಕ್ಕೆ ಆದ್ಯತೆ ನೀಡಿ ಎಂದರು.ಕೊಡಗು ಜಿಲ್ಲಾ ಪ್ರಶಿಕ್ಷಣ ಸಂಚಾಲಕ ಎ.ಕೆ. ಮನು ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಪ್ರಶಿಕ್ಷಣಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು.