ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಟೈಲರಿಂಗ್ ಯಂತ್ರ ಒದಗಿಸುವ ಯೋಜನೆ
ಕಂಪ್ಲಿ: ಪಟ್ಟಣದ ವಿಶ್ವಕರ್ಮ ಭವನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಡಿ.ವೀರಪ್ಪಾಚಾರ್ ಕಲ್ಯಾಣ ವೇದಿಕೆಯ ಉದ್ಘಾಟನಾ ಸಮಾರಂಭ ಶುಕ್ರವಾರ ಧಾರ್ಮಿಕ ವಿಧಿವಿಧಾನಗಳು, ಪೂಜ್ಯರ ಆಶೀರ್ವಚನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು.
ಅರೇಮಾದನಹಳ್ಳಿಯ ವಿಶ್ವಕರ್ಮ ಪೀಠದ ಜಗದ್ಗುರು ಶ್ರೀವಿಭೂಷಿತ ಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಗುರುವಿನ ತತ್ವ, ಆದರ್ಶ ಹಾಗೂ ಮಾರ್ಗದರ್ಶನ ಅರಿತುಕೊಂಡು ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಪರಂಪರೆ, ಸಂಸ್ಕೃತಿ ಮತ್ತು ಸಂಸ್ಕಾರ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಸಮುದಾಯದ ಪ್ರತಿಯೊಬ್ಬರ ಮೇಲಿದೆ ಎಂದರು.ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಮಾತನಾಡಿ, ವಿಶ್ವಕರ್ಮ ಸಮುದಾಯದ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಯೋಜನೆ ರೂಪಿಸಲಾಗಿದ್ದು, ಅವುಗಳ ಪ್ರಯೋಜನ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಟೈಲರಿಂಗ್ ಯಂತ್ರ ಒದಗಿಸುವ ಯೋಜನೆಯಿದ್ದು, ಆಸಕ್ತ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸ್ವಸಹಾಯ ಸಂಘಗಳು ಉತ್ತಮ ವೇದಿಕೆಯಾಗಿವೆ. ಬಿಡಿಸಿಸಿ ಬ್ಯಾಂಕ್ನಲ್ಲಿ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ನೋಂದಣಿ ಮಾಡಿಸಿದರೆ ಬಡ್ಡಿರಹಿತ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಈ ಸೌಲಭ್ಯ ಪಡೆದು ಸಣ್ಣ ಉದ್ಯಮ, ಗೃಹ ಕೈಗಾರಿಕೆ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆ ಆರಂಭಿಸುವ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಮಹಿಳಾ ಅಭಿವೃದ್ಧಿ ನಿಗಮದಿಂದಲೂ ಹಲವು ಸೌಲಭ್ಯಗಳಿದ್ದು, ಅವುಗಳ ಸದ್ಬಳಕೆಗೆ ಮಹಿಳೆಯರು ಮುಂದಾಗಬೇಕು ಎಂದು ಸಲಹೆ ನೀಡಿದರು.ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಪಂಚ ಕಸುಬುಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಹೊಸ ರೂಪ ನೀಡಬೇಕಿದೆ. ಯುವಜನರಿಗೆ ಪಂಚ ಕಸುಬುಗಳಿಗೆ ಸಂಬಂಧಿಸಿದಂತೆ ವಿವಿಧ ತರಬೇತಿ ಕೋರ್ಸ್ಗಳಿದ್ದು, ಅವುಗಳನ್ನು ಪಡೆದುಕೊಳ್ಳುವ ಮೂಲಕ ಕೌಶಲ್ಯ ವೃದ್ಧಿಸಿಕೊಂಡು ಸ್ವಂತ ಉದ್ಯೋಗ ಆರಂಭಿಸಬೇಕು. ಯುವಜನರು ಶಿಕ್ಷಣದ ಜತೆಗೆ ವೃತ್ತಿಪರ ತರಬೇತಿಗೂ ಆದ್ಯತೆ ನೀಡಿದರೆ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಡಿ. ಹಿರೇಹಾಳದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ರುದ್ರಪ್ಪಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪ್ರಮುಖರಾದ ಡಿ.ಮೌನೇಶಾಚಾರ್, ಡಿ.ರಾಘವೇಂದ್ರಾಚಾರ್, ಮಂಟೇ ಲಿಂಗಾಚಾರ್, ಬಿ.ಮಲ್ಲಿಕಾರ್ಜುನ, ಚಂದ್ರಕಾಂತ ಸೋನಾ, ಸಿ.ರಾಜಣ್ಣ, ನಾಗೇಶಕುಮಾರ್ ಕಂಸಾಲಿ, ಡಿ.ವೀಣಾ, ಚಂದ್ರಶೇಖರಾಚಾರ್ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.
ಧಾರ್ಮಿಕ ವಿಧಿವಿಧಾನ, ಮೆರವಣಿಗೆ: ಸಮಾರಂಭಕ್ಕೂ ಮುನ್ನ ಪಟ್ಟಣದ ಸತ್ಯನಾರಾಯಣ ದೇವಸ್ಥಾನದಿಂದ ವಿಶ್ವಕರ್ಮ ಭವನದ ಕಲ್ಯಾಣ ವೇದಿಕೆಯವರೆಗೆ ವಿಶ್ವಕರ್ಮರ ಭಾವಚಿತ್ರ ಹಾಗೂ ಪೂಜ್ಯ ಮಹಾಸ್ವಾಮೀಜಿಗಳ ಭವ್ಯ ಮೆರವಣಿಗೆ ನಡೆಯಿತು. ವಿವಿಧ ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ಮಹಿಳೆಯರು ಹಾಗೂ ಯುವಕರು ಪಾಲ್ಗೊಂಡಿದ್ದರು.ಸಂಸ್ಕೃತ ವಿದ್ವಾಂಸ ಶ್ರೀ ಶಂಕರಾಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ್ ಅವರ ಪೌರೋಹಿತ್ಯದಲ್ಲಿ ಬುಧವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ವಾಸ್ತು ಹೋಮ, ಪುಣ್ಯಾಹ, ರಾಕ್ಷೋಘ್ನ ಹೋಮ, ವಿಶ್ವಕರ್ಮ ಧ್ವಜಾರೋಹಣ ಹಾಗೂ ಚಂಡಿಕಾಯಾಗ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.