ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಸವಿತಾ ಸಮಾಜದ ಯುವಜನತೆ ಶೈಕ್ಷಣಿಕವಾಗಿ, ಅರ್ಥಿಕವಾಗಿ ಮುಂದೆ ಬರಲು ಹಿರಿಯರು ಅಗತ್ಯ ಮಾರ್ಗದರ್ಶ ನೀಡುವ ಅಗತ್ಯವಿದೆ ಎಂದು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ವತಿಯಿಂದ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಸಮಾಜ ಅಭಿವೃದ್ಧಿಯಾಗಬೇಕೆಂದರೆ ಒಗ್ಗಟ್ಟು ಅತಿ ಮುಖ್ಯ. ನಿಮ್ಮಲ್ಲಿ ಸಂಘಟನೆ ಎಂಬುದು ಇದ್ದರೆ, ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಸವಿತಾ ಸಮಾಜದಲ್ಲಿ ಒಗ್ಗಟ್ಟಿದೆ. ಆದರೆ ಸರ್ಕಾರದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿಯೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.ಜಿಪಂ ಉಪ ಕಾರ್ಯದರ್ಶಿ ಹಾಲು ಸಿದ್ದಪ್ಪ ದೊಡ್ಡೇರಿ ಮಾತನಾಡಿ, ಸವಿತಾ ಸಮಾಜ ಸೇವಾ ಮನೋಭಾವನೆ ಹೊಂದಿರುವ ಸಮಾಜ. ಶೈಕ್ಷಣಿಕ, ಅರ್ಥಿಕ, ರಾಜಕೀಯ, ಸಾಮಾಜಿಕವಾಗಿ ತೀರ ಹಿಂದೆ ಉಳಿದಿದೆ. ಒಗ್ಗಟ್ಟಿನಲ್ಲಿ ಇದ್ದರೆ ಮಾತ್ರ ರಾಜಕೀಯ, ಅರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರದ ಸವಿತಾ ಸಮಾಜ ಅಭಿವೃದ್ಧಿ ನಿಗಮ ಹಾಗೂ ಕೇಂದ್ರದ ವಿಶ್ವಕರ್ಮ ಯೋಜನೆಗಳ ಅಡಿಯಲ್ಲಿ ದೊರೆಯುವ ಸವಲತ್ತು ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, 12ನೇ ಶತಮಾನದ ಶರಣರು ದುಡಿಮೆಯೇ ದೇವರೆಂದು ನಂಬಿದ್ದವರು. ಅಂದು ದುಡಿಮೆಗಾಗಿ ಕೈಗೊಂಡ ವೃತ್ತಿಗಳೆ ಇಂದು ಜಾತಿಗಳಾಗಿ ಪರಿವರ್ತನೆಯಾಗಿವೆ. ಶರಣರ ಪ್ರಕಾರ ಯಾವ ವೃತ್ತಿಯೂ ಕೀಳಲ್ಲ, ಮೇಲಲ್ಲ. ಎಲ್ಲ ವೃತ್ತಿಗೂ ಅದರದ್ದೇ ಆದ ಮಾನ್ಯತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೇವಾ ವೃತ್ತಿಗಳೆ ಸಂಕುಚಿತಗೊಂಡು, ಒಬ್ಬರ ಹಬ್ಬಗಳಲ್ಲಿ ಮತ್ತೊಬ್ಬರು ಭಾಗವಹಿಸದಂತಹ ವೈರುಧ್ಯತೆ ಬೆಳೆದಿದೆ. ಇದು ತಪ್ಪು ಎಲ್ಲಾ ದಾರ್ಶಾನಿಕ ಜಯಂತಿಗಳನ್ನು ಸಮಾಜದ ಎಲ್ಲಾ ಸಮುದಾಯಗಳು ಕೂಡಿ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಕಟ್‌ವೆಲ್ ರಂಗನಾಥ ಮಾತನಾಡಿ, ನಮ್ಮ ತಾತನಿಂದ ತಂದೆ, ತಂದೆಯಿಂದ ನಾನು ಈ ಕ್ಷೌರಿಕ ವೃತ್ತಿ ಕಲಿತು ಸೇವೆ ಮಾಡುತ್ತಿದ್ದೇನೆ. ಇದುವರೆಗೂ ಕ್ಷೌರಿಕ ವೃತ್ತಿ ಮಾಡುವವರು ಮಾತ್ರ ಸವಿತಾ ಸಮಾಜ ಎಂದುಕೊಂಡಿದ್ದೆವು. ನಮ್ಮಲ್ಲಿಯೂ ವಿದ್ಯಾವಂತರಿದ್ದಾರೆ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಜನರಿದ್ದಾರೆ ಎಂದರು.
ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸವಿತಾ ಸಮಾಜದ ಯುವಜನರಿಗೆ ಕುಲಕಸುಬಿನ ಜೊತೆಯಲ್ಲಿಯೇ ಅಧುನಿಕ ತಂತ್ರಜ್ಞಾನ ಬೆಳೆಸಿಕೊಂಡು ಹೊಸ ವಿನ್ಯಾಸದ ಬ್ಯೂಟಿಷಿಯನ್‌ಗಳಾಗಿ ಹೇಗೆ ಬೆಳೆಯಬಹುದು ಎಂಬ ಬಗ್ಗೆ ಹಲವಾರು ತರಬೇತಿ ನೀಡಲು ಮುಂದಾಗಿದ್ದೇವೆ. ಈಗಾಗಲೇ ಶಾಸಕ ಜಿ.ಬಿ.ಜೋತಿ ಗಣೇಶ ಅವರ ಹೆಚ್ಚಿನ ಸಹಕಾರದಿಂದ ಭವ್ಯವಾದ ಸವಿತಾ ಸಮಾಜದ ಭವನ ತಲೆ ಎತ್ತಿದೆ. ಅಲ್ಲಿಯೇ ತರಬೇತಿ ಕಾರ್ಯಕ್ರಮಗಳು ನಡೆಸಲು ತೀರ್ಮಾನಿಸಲಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ ಎಂದರು.ಸ್ವದೇಶಿ ವಿಶ್ವಣ್ಣ ಅವರು ಸವಿತಾ ಮಹರ್ಷಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಆಶ್ವಥನಾರಾಯಣ್, ಹಿರಿಯ ಕ್ಷೌರಿಕ ಸುಬ್ರಮಣ್ಯ, ಎನ್., ಯುವ ಕ್ಷೌರಿಕ ಶಿವಣ್ಣ, ಡೋಲು ವಿದ್ವಾನ್ ಹಚ್.ಜಿ.ಶಿವಶಂಕರ್, ಬ್ಯೂಟಿಷಿಯನ್ ಶ್ರೀಮತಿ ಎನ್.ಮಂಜುಳಾ ಅವರುಗಳನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ,ಸುರೇಶಕುಮಾರ್,ಜಿಲ್ಲಾ ಸವಿತಾ ಸಮಾಜದ ಕೆ.ವಿ.ನಾರಾಯಣ್,ಪದಾಧಿಕಾರಿಗಳಾದ ಸುರೇಶ್.ಎಸ್.,ಗಂಗಾಧರ್.ಬಿ., ಪಾರ್ಥಸಾರಥಿ. ಬಿ.ಎಸ್., ಟಿ.ಆರ್.ಮೇಲಾಕ್ಷಪ್ಪ, ಚೈತನ್ಯಕುಮಾರಿ,ಸಿ.ಆರ್, ದಾಸರಾಜು.ಬಿ.ವಿ, ಸತ್ಯನಾರಾಯಣ, ಶ್ರೀಮತಿ ಲಲಿತಮ್ಮ.ವಿ, ಟಿ.ವಿ.ಸೀತಾರಾಮಯ್ಯ, ಕೆ.ಸಿ.ವರದರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲಾ ವಾಧ್ಯಗಾರರ ಸಂಘದ ಅಧ್ಯಕ್ಷ ಗಂಗಾಧರ್ .ಬಿ. ಮತ್ತು ತಂಡದಿಂದ ನಾದಸ್ವರ ವಾದನ ನಡೆಯಿತು.