ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ವೀರಶೈವ, ಲಿಂಗಾಯತರಲ್ಲಿ ಐಕ್ಯತೆ ಮತ್ತು ಅಭಿವೃದ್ಧಿ ಕಾಣುವುದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತುಮಕೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸೇವಾಧೀಕ್ಷೆ, ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕಾಗಿದೆ, ವೀರಶೈವ, ಲಿಂಗಾಯತ ಧರ್ಮದ ಆಚರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಅಂಗೈಯಲ್ಲಿ ಲಿಂಗಧರಿಸಿ ನಿತ್ಯವೂ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗಿದೆ. ಇನ್ನೊಂದು ಧರ್ಮದ ಅನುಸರಣೆ ಮಾಡುವುದು ಸರಿಯಲ್ಲ. ಸತ್ಯ ನಾರಾಯಣ ಪೂಜೆಗೆ, ಲಿಂಗಾಯತ, ವೀರಶೈವರಿಗೂ ಸಂಬಂಧವೇನು ಎಂದು ಪ್ರಶ್ನಿಸಿದ ಅವರು, ಪರಧರ್ಮ ಸಹಿಷ್ಣುತೆ ಇರಲಿ, ಆದರೆ ನಮ್ಮ ಧರ್ಮದ ಆಚರಣೆ ಇರಲಿ, ಯಾರು ಲಿಂಗಧಾರಣೆ ಮಾಡಿಕೊಂಡಿಲ್ಲವೋ, ಅವರಿಗೆ ಸೇವಾಧೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.ನಮ್ಮಲ್ಲಿ ಒಗ್ಗಟ್ಟು ಕೇವಲ ರಾಜಕೀಯ ಅಧಿಕಾರಕ್ಕಾಗಿ ಮಾತ್ರ ಇದ್ದರೆ ಸಾಲದು, ಎಲ್ಲಾ ರಂಗದಲ್ಲಿಯೂ ವೀರಶೈವ, ಲಿಂಗಾಯತರು ಮುಂದೆ ಬರುವಂತೆ ಆಗಬೇಕು. ಈ ನಿಟ್ಟಿನಲ್ಲಿ ಶಂಕರ್ ಬಿದರಿಯವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ. ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ನೇಮಕಕ್ಕೆ ಚುನಾವಣೆ ನಡೆಸುವ ಬದಲು ಅವಿರೋಧ ಆಯ್ಕೆಗೆ ಎಲ್ಲರೂ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ತುಮಕೂರು ಜಿಲ್ಲಾ ಪದಾಧಿಕಾರಿಗಳಿಗೆ ಸೇವಾ ಧೀಕ್ಷೆ ನೀಡಿ, ದಿಕ್ಸೂಚಿ ಭಾಷಣ ಮಾಡಿದ ಮಹಾಸಭಾದ ಕರ್ನಾಟಕ ರಾಜ್ಯಘಟಕದ ಅಧ್ಯಕ್ಷ ಶಂಕರ ಬಿದರಿ, ಇಂದು ಸೇವಾ ಧೀಕ್ಷೆ ಸ್ವೀಕರಿಸಿರುವ ಎಲ್ಲಾ ಪದಾಧಿಕಾರಿಗಳು ಮುಂದಿನ ಐದು ವರ್ಷಗಳ ಕಾಲ ವೀರಶೈವ, ಲಿಂಗಾಯತ ಮಹಾಸಭಾವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ರೇಣುಕಾಚಾರ್ಯರು ಸೇರಿದಂತೆ ಬಸವಾದಿ ಶರಣರ ಆಶೀರ್ವಾದ ಇವರ ಮೇಲಿದೆ. ಇವರ ಜೊತೆ ಕೈಜೋಡಿಸುವ ಮೂಲಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಉನ್ನತಿಗೆ ಸಹಕಾರ ನೀಡಬೇಕಿದೆ ಎಂದರು.ಭಾರತದಲ್ಲಿ ವೀರಶೈವ, ಲಿಂಗಾಯತರು ಬಹುಸಂಖ್ಯೆಯಲ್ಲಿದ್ದಾರೆ. ಆದರೆ ಒಗ್ಗಟ್ಟಿನ ಕೊರತೆಯಿಂದ ಎಲ್ಲಾ ವರ್ಗಗಳಲ್ಲಿಯೂ ಹಿಂದುಳಿದಿದ್ದೇವೆ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇ. 3ರಷ್ಟಿರುವ ಬ್ರಾಹ್ಮಣರೇ ಇಡೀ ದೇಶವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲಾ ರಂಗದಲ್ಲಿಯೂ ಬ್ರಾಹ್ಮಣ ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಿಂಹಪಾಲು ಪಡೆದಿದೆ. ಕೇಂದ್ರದ ಮಂತ್ರಿ ಮಂಡಲದಲ್ಲಿ 18 ಜನ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ. ನಮ್ಮವರಿಗೆ ಇದುವರೆಗೂ ಕ್ಯಾಬಿನೆಟ್ ಸ್ಥಾನಮಾನ ಸಿಕ್ಕಿಲ್ಲ. ಐಎಎಸ್, ಐಪಿಎಸ್, ರಾಜ್ಯಪಾಲರ ಹುದ್ದೆಗಳಲ್ಲಿ ಆ ಸಮುದಾಯವೇ ಹೆಚ್ಚಿದೆ. ಇದಕ್ಕೆ ಸಂಘಟನೆಯ ಕೊರತೆಯೇ ಕಾರಣ. ವೀರಶೈವ, ಲಿಂಗಾಯತ ಎಂಬ ನಮ್ಮಲ್ಲಿನ ಒಡಕು ಹೋಗಬೇಕು. ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳು ಹೇಳಿದಂತೆ ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ. ಎರಡೂ ಒಂದೇ. ನಮ್ಮ ನಡುವಿನ ವ್ಯತ್ಯಾಸ ವೀರಶೈವರೆಂದರೆ ಸಂಸ್ಕೃತ, ಲಿಂಗಾಯತರೆಂದರೆ ಕನ್ನಡ. ಜಾಗತಿಕ ಲಿಂಗಾಯತ ಮಹಾಸಭಾದವರು ನಮ್ಮನ್ನು ಏನು ಟೀಕಿಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಶಂಕರ ಬಿದರಿ ಕಿವಿ ಮಾತು ಹೇಳಿದರು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ವೀರಶೈವ, ಲಿಂಗಾಯತರ ಜನಸಂಖ್ಯೆ ಲಕ್ಷ ದಾಟಿದೆ, ಆದರೆ ಮಹಾಸಭಾದಲ್ಲಿ ಸದಸ್ಯರಾಗಿರುವುದು ಕೇವಲ 2 ಸಾವಿರ ಜನ ಮಾತ್ರ. ಮಹಾಸಭಾದ ತೀರ್ಮಾನದಂತೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಯಲ್ಲಿಯೂ ಓರ್ವ ಸದಸ್ಯನನ್ನು ನೋಂದಾಯಿಸುವುದು ನಮ್ಮ ಮುಂದಿರುವ ಸವಾಲು. ಈ ಕೆಲಸವನ್ನು ನಾನು ಮತ್ತು ನನ್ನ ತಂಡ ಶಿರಸಾ ವಹಿಸಿ ಪಾಲಿಸುತ್ತೇವೆ ಎಂದರು.
ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಾ.ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಳ್ಳಿ ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಎಸ್.ಕೆ.ರಾಜಶೇಖರ್, ಮಹಿಳಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮುಕ್ತಾಂಭ, ಜಿಲ್ಲಾ ಪದಾಧಿಕಾರಿಗಳಾದ ಡಾ.ಎಸ್.ಪರಮೇಶ, ಎಸ್.ಡಿ.ದಿಲೀಪ್‌ಕುಮಾರ್, ಎಲ್.ಪಿ.ರವಿಶಂಕರ್, ಗೀತಾ ರುದ್ರೇಶ್, ಶಶಿ ಹುಲಿಕುಂಟೆ ಮಠ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ಟಿ.ಎಸ್.ರುದ್ರಪ್ರಸಾದ್, ಟಿ.ಎಂ.ವಿಜಯಕುಮಾರ್, ಟಿ.ಎಂ.ವಿಜಯಕುಮಾರ್ ತಳವಾರನಹಳ್ಳಿ, ಶ್ರೀಮತಿ ಬಿಂದು, ಯುವ ಘಟಕದ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜಕ್ಕಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು.