ಭಾರತದ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಮುಖ ಪಾತ್ರವಹಿಸಿದ್ದರು. ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಅ.31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತದೆ. ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡುವ ಮಹತ್ವ ವಿವರಿಸಿದ ಅವರು, ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವಲ್ಲಿ ಪಟೇಲರ ಐತಿಹಾಸಿಕ ಪಾತ್ರವು ಇಂದಿನ ಯುವಜನತೆಗೆ ಸದಾ ಸ್ಫೂರ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಪಾವಗಡ ಪೊಲೀಸ್ ಠಾಣೆ ವತಿಯಿಂದ ಶನಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂಕೇತ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಲಾಯಿತು.

ಪಾವಗಡದ ಪೊಲೀಸ್ ಸಿಬ್ಬಂದಿ ಹಾಗೂ ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸುವ ಮೂಲಕ ಉತ್ಸಾಹದಿಂದ ಪಾಲ್ಗೊಂಡಿದ್ದರು

ಬಳಿಕ ಪಟ್ಟಣದ ಶ್ರೀ ಶನಿಮಹಾತ್ಮಸ್ವಾಮಿ ವೃತ್ತಕ್ಕೆ ಆಗಮಿಸಿ ಬೃಹತ್ ಮಾನವ ಸರಪಳಿ ನಿರ್ಮಿಸಿ ದೇಶದ ಕುರಿತು ಜೈಕಾರ ಮೊಳಗಿಸಿದರು.

ಪಿಎಸ್‌ಐ ಸುನೀಲ್ ಮಾತನಾಡಿ, ಭಾರತದ ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಅಖಂಡ ಭಾರತದ ನಿರ್ಮಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಮುಖ ಪಾತ್ರವಹಿಸಿದ್ದರು. ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರತಿವರ್ಷ ಅ.31ರಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತದೆ. ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡುವ ಮಹತ್ವ ವಿವರಿಸಿದ ಅವರು, ಸ್ವಾತಂತ್ರ್ಯಾನಂತರ ದೇಶವನ್ನು ಒಗ್ಗೂಡಿಸುವಲ್ಲಿ ಪಟೇಲರ ಐತಿಹಾಸಿಕ ಪಾತ್ರವು ಇಂದಿನ ಯುವಜನತೆಗೆ ಸದಾ ಸ್ಫೂರ್ತಿಯಾಗಿದೆ ಎಂದರು.

ಏಕತೆಯಲ್ಲಿ ಶಕ್ತಿ ಇದೆ ಎಂಬ ಸಂದೇಶವು ಭಾಷೆ, ಧರ್ಮ, ಸಂಸ್ಕೃತಿ ಹಾಗೂ ಪ್ರಾದೇಶಿಕ ವೈವಿಧ್ಯಗಳ ನಡುವೆಯೂ ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯನ್ನು ಬಲಪಡಿಸುತ್ತದೆ ಎಂದರು.

ಪೊಲೀಸ್ ಇಲಾಖೆಯ ಸಿಬ್ಬಂದಿ ರಾಮಕೃಷ್ಣಪ್ಪ, ಶ್ರೀನಿವಾಸ್, ಚನ್ನಮ್ಮ, ಪ್ರವೀಣ್, ಗೋಪಾಲಕೃಷ್ಣ, ನಾಗಭೂಷಣ ರೆಡ್ಡಿ, ದೀಪಕ್ ಕುಮಾರ್, ಗೀತಾ ಹಾಗೂ ಬಿಸ್ಮಿಲ್ಲಾ ಜಾಥಾದಲ್ಲಿ ಭಾಗವಹಿಸಿದ್ದು, ಸ್ವಾಮಿ ವಿವೇಕಾನಂದ ಕಾಲೇಜು ಮತ್ತು ಶಾಂತಿ ಎಸ್.ಎಸ್.ಕೆ. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೆ ಸಹಕರಿಸಿದರು.