ರಂಗಭೂಮಿ ಚಲಿಸುವ ವಿಶ್ವವಿದ್ಯಾಲಯ

| Published : May 14 2024, 01:15 AM IST

ಸಾರಾಂಶ

ರಂಗಭೂಮಿ ಕಲಾವಿದರಿಗೆ ಸಚ್ಚಾರಿತ್ರ್ಯ ಹಾಗೂ ತದಾತ್ಮತೆ ಮುಖ್ಯ. ಪ್ರಾರಂಭದಲ್ಲಿ ಜಾನಪದ ರಂಗಭೂಮಿ ದೊಡ್ಡಾಟ, ಸಣ್ಣಾಟ, ಶ್ರೀ ಕೃಷ್ಣ ಪಾರಿಜಾತ, ಗೊಂಬೆಯಾಟದಂತಹ ಆಟಗಳ ಮೂಲಕ ಹುಟ್ಟಿಕೊಂಡಿತು.

ಧಾರವಾಡ:

ರಂಗಭೂಮಿ ಚಲಿಸುವ ವಿಶ್ವವಿದ್ಯಾಲಯವಿದ್ದಂತೆ. ನಾಟಕಕ್ಕೆ ಪ್ರೇಕ್ಷಕರೇ ಜೀವಾಳ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಎ. ಮುರಿಗೆಪ್ಪ ದತ್ತಿ ನಿಮಿತ್ತ ಆಯೋಜಿಸಿದ್ದ ‘ಕನ್ನಡ ರಂಗಭೂಮಿಯ ತುಡಿತ ಹಾಗೂ ತಲ್ಲಣಗಳು’ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.

ರಂಗಭೂಮಿ ಕಲಾವಿದರಿಗೆ ಸಚ್ಚಾರಿತ್ರ್ಯ ಹಾಗೂ ತದಾತ್ಮತೆ ಮುಖ್ಯ. ಪ್ರಾರಂಭದಲ್ಲಿ ಜಾನಪದ ರಂಗಭೂಮಿ ದೊಡ್ಡಾಟ, ಸಣ್ಣಾಟ, ಶ್ರೀ ಕೃಷ್ಣ ಪಾರಿಜಾತ, ಗೊಂಬೆಯಾಟದಂತಹ ಆಟಗಳ ಮೂಲಕ ಹುಟ್ಟಿಕೊಂಡಿತು. ಒಂದು ಕಾಲದಲ್ಲಿ ರಂಗಭೂಮಿ ಹವ್ಯಾಸದಿಂದ ಮಕ್ಕಳು ಹಾಳಾಗುತ್ತಾರೆ ಎಂಬ ತಲ್ಲಣಗಳಿದ್ದವು. ಅದೇ ರಂಗಭೂಮಿಯಿಂದ ಏಣಗಿ ಬಾಳಪ್ಪರಂತವರು ಹೆಚ್ಚು ಯಶಸ್ಸು ಗಳಿಸಿದ್ದು ಉಂಟು. ಬಾಳಪ್ಪನವರು ಬಾಲ್ಯದಿಂದಲೇ ಜಾನಪದ ನಾಟಕದ ಮೂಲಕ ಪ್ರಚಾರಕ್ಕೆ ಬಂದಿದ್ದುಂಟು ಎಂದರು.

ನಾಟಕಗಳು ಜನರ ಶಿಕ್ಷಣ ಹಾಗೂ ಅವರ ಕಲ್ಯಾಣಕ್ಕಾಗಿ ಹುಟ್ಟಿ ಬಂದಿವೆ. ರಂಗಭೂಮಿಯಿಂದ ಪರಸ್ಪರರಲ್ಲಿ ಆತ್ಮೀಯತೆ ಹುಟ್ಟುವುದು. ಭರತ ಮುನಿಯ ನಾಟ್ಯ ಶಾಸ್ತ್ರದಲ್ಲಿ ‘ಕುಣಿತವೇ ಎಲ್ಲ ಕಲೆಗೂ ಮೂಲ’ ಎಂದು ಹೇಳಲಾಗಿದೆ. ಸಂಗೀತ, ನಾಟ್ಯ ಹಾಗೂ ಕಲೆ, ನಾಟಕಗಳ ತ್ರಿವೇಣಿ ಸಂಗಮ. ನವರಸಗಳಿಂದ ತುಂಬಿದ ನಾಟಕಗಳು ಮಾತ್ರ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಬಲ್ಲವು. ಮಹಾನಗರಗಳಲ್ಲಿ ನಾಟಕ ಪ್ರದರ್ಶನಗಳು ಇಂದು ಕಡಿಮೆಯಾಗಿದ್ದು ವಿಷಾದನೀಯ. ಸರ್ಕಾರ ಹಾಗೂ ನಾಟಕ ಅಕಾಡೆಮಿಗಳು ಪ್ರೋತ್ಸಾಹ ನೀಡಿದಲ್ಲಿ ಮತ್ತೆ ರಂಗಭೂಮಿಗೆ ಹಿಂದಿನ ವೈಭವ ಮರುಕಳಿಸಬಹುದು ಎಂದು ಹೇಳಿದರು.

ದತ್ತಿ ಕೇಂದ್ರಬಿಂದು ಪ್ರೊ. ಎ. ಮುರಿಗೆಪ್ಪ ಅವರು ದತ್ತಿ ಆಶಯ ಕುರಿತು ರಂಗಭೂಮಿಯ ತುಡಿತ-ತಲ್ಲಣಗಳ ಬಗ್ಗೆ ಹೇಳಿದರು. ವೇದಿಕೆ ಮೇಲೆ ಲೀಲಾ ಮುರಿಗೆಪ್ಪ ಇದ್ದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಭೂಮಿ ಕಲಾವಿದ ಗದಿಗೆಯ್ಯ ಹಿರೇಮಠ ಮಾತನಾಡಿ, ಸಂಜ್ಞೆಯಿಂದ ಪ್ರಾರಂಭವಾದ ಕಲೆ ಅನುಕರಣೆ ಮೂಲಕ ಬೆಳೆದು ಬಂದಿತು. ನಾಟಕಗಳಲ್ಲಿ ಭಾಷೆಗೆ ಭಾವನೆ ತುಂಬಿ ಅಭಿನಯಿಸಿದಾಗ ಮಾತ್ರ ಪ್ರೇಕ್ಷಕರ ಮನಗೆಲ್ಲಲು ಸಾಧ್ಯ. ಇಂದು ನಾಟಕ ನೋಡುವವರ ಸಂಖ್ಯೆ ಕ್ಷೀಣಿಸಿದ್ದರಿಂದ ರಂಗಭೂಮಿಯಲ್ಲಿ ಅನೇಕ ತಲ್ಲಣಗಳು ಉಂಟಾಗಿವೆ ಎಂದರು.

ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.