ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕೋರ್ಸ್‌ಗಳು ಸಹ ಬದಲಾಗಬೇಕು. ಅದರಲ್ಲೂ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಕವಿವಿ ಹೆಜ್ಜೆ ಇಡುತ್ತಿದೆ.
ಧಾರವಾಡ:
ಉನ್ನತ ಶಿಕ್ಷಣದಲ್ಲಿ ಕೌಶಲ್ಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ತಾಂತ್ರಿಕ ಬದಲಾವಣೆ ತರಲು ಉದ್ದೇಶಿಸಿದೆ ಎಂದು ಕುಲಪತಿ ಪ್ರೊ. ಎ.ಎಂ. ಖಾನ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕೋರ್ಸ್‌ಗಳು ಸಹ ಬದಲಾಗಬೇಕು. ಅದರಲ್ಲೂ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಕವಿವಿ ಹೆಜ್ಜೆ ಇಡುತ್ತಿದೆ. ಬಿಎ, ಬಿಎಸ್ಸಿ, ಬಿಕಾಂ ಅಂತಹ ಸಾಂಪ್ರದಾಯಿಕ ಕೋರ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ ವಿಷಯದ ಕೌಶಲ್ಯ ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದರು.
ಇನ್ನು, ಬಿಸಿಎ ಎಐ ಅಥವಾ ಬಿಸಿಎ ಸೈಬರ್ ಸೆಕ್ಯುರಿಟಿ ಅಥವಾ ಬಿಸಿಎ ಡೇಟಾ ಸೈನ್ಸ್, ಮಿಷನ್ ಲರ್ನಿಂಗ್ ಅಂತಹ ಕೋರ್ಸ್ ಪರಿಚಯಿಸುವ ಚಿಂತನೆ ನಡೆದಿದೆ ಎಂದ ಅವರು, ಈ ಕೋರ್ಸ್‌ಗಳಿಗೆ ಆಧುನಿಕ ಸ್ಪರ್ಶ ನೀಡಲು ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡುವ ಮೂಲಕ ಕವಿವಿ ವಿದ್ಯಾರ್ಥಿಗಳಿಗೆ ಪದವಿ ಮುಗಿದ ತಕ್ಷಣ ಗೌರವಯುತ ಉದ್ಯೋಗ ಸಿಗುವಂತೆ ನೋಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ, ವಿವಿ ದೈನಂದಿನ ಆಡಳಿತ ನಡೆಯಲು ಬೇಕಾದ ಅಗತ್ಯ ಆರ್ಥಿಕ ಸಂಪನ್ಮೂಲವಿದ್ದು, ವಾರ್ಷಿಕವಾಗಿ ನಿವೃತ್ತ ಉದ್ಯೋಗಿಗಳಿಗೆ ನೀಡಲು ಪಿಂಚಣಿ ಹಣದ ಕೊರತೆ ಮೊದಲಿನಿಂದಲೂ ಇದೆ. ವಾರ್ಷಿಕವಾಗಿ ₹ 127 ಕೋಟಿ ಅಗತ್ಯವಿದ್ದು, ಸರ್ಕಾರ ₹ 55 ಕೋಟಿ ನೀಡಿದೆ. ಈ ವಿಷಯವಾಗಿ ನಾಲ್ಕು ಬಾರಿ ಸರ್ಕಾರದೊಂದಿಗೆ ಸಭೆಗಳಾಗಿದ್ದು, ಸದ್ಯದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಸಿಗುವ ಭರವಸೆಯನ್ನು ಉನ್ನತ ಶಿಕ್ಷಣ ಸಚಿವರು ನೀಡಿದ್ದಾರೆ ಎಂದರು.
ಕವಿವಿ, ಕರ್ನಾಟಕ ಕಾಲೇಜು ದೊಡ್ಡ ವಿಸ್ತೀರ್ಣ ಹೊಂದಿದ್ದು ಅತಿಕ್ರಮಣ ಆಗಬಾರದೆಂದು ಸರ್ವೇ ಕಾರ್ಯ ನಡೆಸಿದ್ದು ಸದ್ಯದಲ್ಲಿಯೇ ಗಡಿ ಗುರುತಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.