ಪ್ರತಿ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ತಮ್ಮಲ್ಲಿರುವ ವಿಶೇಷ ಪ್ರತಿಭೆ ಮತ್ತು ಸಾಮರ್ಥ್ಯದ ಆಧಾರದ ಹಲವರು ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಸುಪ್ತ ಪ್ರತಿಭೆ ಹಾಗೂ ವಿಶಿಷ್ಟ ಸಾಮರ್ಥ್ಯವನ್ನು ಸ್ಪರ್ಧೆಗಳ ಮೂಲಕ ಅನಾವರಣಗೊಳಿಸಿ ಉತ್ತಮ ಸಾಧನೆಯೊಂದಿಗೆ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸುವಂತೆ ಶಾಸಕ ಪಿ.ರವಿಕುಮಾರ್ ಯುವಜನರಿಗೆ ಸಲಹೆ ನೀಡಿದರು.ನಗರದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿ ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ತಮ್ಮಲ್ಲಿರುವ ವಿಶೇಷ ಪ್ರತಿಭೆ ಮತ್ತು ಸಾಮರ್ಥ್ಯದ ಆಧಾರದ ಹಲವರು ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕು. ಸ್ವಾಮಿ ವಿವೇಕಾನಂದರು ಅಲ್ಪ ವಯಸ್ಸಿನಲ್ಲಿಯೇ ವಿಶ್ವದ ಎದುರು ಭಾರತದ ಘನತೆಯನ್ನು ಎತ್ತಿಹಿಡಿದ ಆದರ್ಶವನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕಲೆ, ಕ್ರೀಡೆ, ಕಬಡ್ಡಿ, ಕ್ರಿಕೆಟ್, ರಂಗೋಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಪ್ರತಿ ಗ್ರಾಪಂಗೆ ಒಂದರಂತೆ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ವಾರು ಯುವಕ-ಯುವತಿಯರ ‘ಭಾರತ್ ಜೋಡೋ ಸಂಘ’ಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಪ್ರತಿ ಸಂಘಟನೆಗೆ ಸರ್ಕಾರದಿಂದ ತಲಾ ೧೦ ಲಕ್ಷ ಅನುದಾನ ನೀಡಲಾಗುವುದು. ೧೬ರಿಂದ ೩೫ ವರ್ಷದ ಯುವಕ-ಯುವತಿಯರು ಸಂಘಗಳ ಸದಸ್ಯರಾಗಿ ನೋಂದಾಯಿಸಿಕೊಂಡು ಸ್ಥಳೀಯವಾಗಿ ಸೃಜನಶೀಲ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.೬೫ಕ್ಕೂ ಹೆಚ್ಚು ಯುವಜನರಿದ್ದು, ಇದು ರಾಷ್ಟ್ರದ ಅಭಿವೃದ್ಧಿಗೆ ದೊರೆತಿರುವ ಮಹತ್ವದ ಜನಸಂಖ್ಯಾ ಲಾಭಾಂಶವಾಗಿದೆ. ಯುವಜನರ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯವನ್ನು ಸಮರ್ಥ ಮಾನವ ಸಂಪನ್ಮೂಲವಾಗಿ ಪರಿವರ್ತಿಸಿ ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲು ಸಾಧ್ಯ ಎಂದರು.
ವೈದ್ಯರು, ಎಂಜಿನಿಯರ್ಗಳಾದರೆ ಮಾತ್ರ ಯಶಸ್ಸು ಸಾಧಿಸಿದಂತಲ್ಲ. ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಯುವಜನರು ತಮ್ಮ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ದೊಡ್ಡ ಕನಸು ಹಾಗೂ ಸ್ಪಷ್ಟ ಗುರಿ ಹೊಂದಬೇಕು. ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದಿಂದ ಸವಾಲುಗಳನ್ನು ಎದುರಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ಮಂಡ್ಯ ಜಿಲ್ಲೆಯ ತಂಡವನ್ನು ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ , ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವೈ.ಸಿ.ಮನುಜಶ್ರೀ, ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಎಸ್.ಶ್ರುತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಯುವಕ-ಯುವತಿಯರು ಉಪಸ್ಥಿತರಿದ್ದರು.