ಸಾರಾಂಶ
ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಕೆನರಾ ಬ್ಯಾಂಕ್ ಬಳಿ ಇರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ೨೦ಲೀಟರ್ ನೀರು ಪಡೆಯಬೇಕಾದರೆ ಹೆಚ್ಚು ಕಡಿಮೆ ₹ ೧೦ ರಿಂದ ₹ ೧೨ಕಾಯಿನ್ ಹಾಕಬೇಕಾದ ಪರಿಸ್ಥಿತಿ ಎದುರಾಗಿದ್ದು, ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ₹೧ ಕಾಯಿನ್ ಹಾಕಿದರೆ ೫ ಲೀಟರ್ ನಂತೆ ೨೦ ಲೀಟರ್ ಕ್ಯಾನ್ ತುಂಬಲು ನಾಲ್ಕು ಕಾಯಿನ್ ಹಾಕಬೇಕು. ಆದರೆ ಈ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಮಾತ್ರ ೧ ಕಾಯಿನ್ ಹಾಕಿದರೆ ೧ ರಿಂದ ೨ ಲೀಟರ್ ನೀರು ಮಾತ್ರ ಬರುತ್ತದೆ. ಇದರಿಂದ ಇಲ್ಲಿ ಮಾತ್ರ ೧೦ಕ್ಕೂ ಅಧಿಕ ಕಾಯನ್ ಹಾಕಬೇಕು.ಅಂಗಡಿಗಳಲ್ಲಿ ಕಮಿಷನ್ ವ್ಯಾಪಾರ: ಕೆಲ ಅಂಗಡಿಗಳಲ್ಲಿ ₹ ೧೦ಗೆ ೮ ಕಾಯಿನ್ ನೀಡುತ್ತಾರೆ. ಇದರಿಂದ ಕಾಯಿನ್ ಪಡೆಯಲು ಕೂಡ ಕಮಿಷನ್ ನೀಡಬೇಕಾಗಿದ್ದು, ಆ ೮ ಕಾಯಿನ್ ಹಾಕಿದರೂ ಸಹ ೨೦ ಲೀಟರ್ ಕ್ಯಾನ್ ತುಂಬುವುದಿಲ್ಲ. ಇದರಿಂದ ತೀವ್ರ ರೋಷಿ ಹೋಗಿರುವ ಜನ ಪಪಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಮಧ್ಯ ಭಾಗದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ಇದಾಗಿದ್ದು, ಸುತ್ತಮುತ್ತ ಪ್ರದೇಶದ ಬಹುತೇಕ ಜನರು ಇಲ್ಲಿಯೇ ಬರುತ್ತಾರೆ. ಆದರೆ ನೀರು ಕಡಿಮೆ ಬರುವುದರಿಂದ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ನೀರು ತುಂಬಿಕೊಳ್ಳಬೇಕು. ಅಲ್ಲದೇ ಬಹುತೇಕ ಜನ ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಬೇರೆ ಕಡೆಗೆ ಹೋಗುತ್ತಾರೆ.ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸಿಗಲಿ ಎಂದು ಸರ್ಕಾರದಿಂದ ಲಕ್ಷಾಂತರ ವೆಚ್ಚ ಮಾಡಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಶುದ್ದ ನೀರಿಗೆ ನಿರ್ದಿಷ್ಟ ದರ ನಿಗದಿ ಮಾಡಲಾಗುತ್ತದೆ.ಇದರಿಂದ ಆದಾಯ ಕೂಡ ಬರುತ್ತದೆ. ಆದಾಯ ಪಡೆಯುವ ಪಪಂ ನಿರ್ವಹಣೆ ಮಾತ್ರ ಸಮರ್ಪಕವಾಗಿ ಮಾಡುವುದಿಲ್ಲ ಎಂಬುವುದು ಪ್ರಜ್ಞಾವಂತ ನಾಗರಿಕರ ಅಂಬೋಣ
ಇಲ್ಲಿಯ ಶುದ್ದ ಕುಡಿಯುವ ನೀರಿನ ಘಟಕ ನಿರ್ವಹಣೆಯ ಕೊರತೆಯಿಂದ ಕೆಟ್ಟು ಕೆಲ ತಿಂಗಳುಗಳೇ ಕಳೆದಿವೆ. ಹಲವು ದಿನಗಳಿಂದ ಜನರು ಈ ಗೋಳು ಅನುಭವಿಸುವಂತಾಗಿದೆ. ಪಟ್ಟಣ ಪಂಚಾಯತನವರು ಮಾತ್ರ ನೀರಿನ ಘಟದ ದುರಸ್ಥಿ ಮಾಡಲು ಮುಂದಾಗಿಲ್ಲ. ಈ ಬಗ್ಗೆ ಹಲವು ಬಾರಿ ದೂರಿದರೂ ಕೂಡ ಏನಾದರೂ ಒಂದು ಸಬೂಬು ನೀಡುತ್ತಾರೆ. ವಿನಃ ದುರಸ್ಥಿಗೊಳಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸ್ಥಳೀಯ ಸಂಸ್ಥೆ ಆಡಳಿತದ ಕಾರ್ಯವೈಖರಿ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಸಾರ್ವಜನಿಕರು, ತಕ್ಷಣ ಈ ಶುದ್ದ ಕುಡಿಯುವ ನೀರಿನ ಘಟಕವನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.ಈ ಬಗ್ಗೆ ಪರಿಶೀಲಿಸಿ ಘಟಕದ ನಿರ್ವಹಣಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಶೀಘ್ರವಾಗಿ ದುರಸ್ಥಿಗೊಳಿಸಲಾಗುವುದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಹೇಳಿದ್ದಾರೆ.
;Resize=(128,128))
;Resize=(128,128))