ಬೋರ್‌ವೆಲ್ ದುರಸ್ತಿಗೆ ಬೇಕಾಬಿಟ್ಟಿ ಬಿಲ್; ಆಕ್ರೋಶ

| Published : Jul 29 2025, 01:04 AM IST / Updated: Jul 29 2025, 01:05 AM IST

ಸಾರಾಂಶ

ಕಳೆದ ಎರಡು ವರ್ಷಗಳಿಂದ ಸಾಕಷ್ಟು ಬಾರಿ ಹೇಳಿದರೂ ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಹಾಳಾದ ಬೋರ್‌ವೆಲ್ ದುರಸ್ತಿಗೆ ಬೇಕಾಬಿಟ್ಟಿ ಬಿಲ್ ನೀಡಲಾಗುತ್ತಿದೆ.

ಯಲ್ಲಾಪುರ: ಕಳೆದ ಎರಡು ವರ್ಷಗಳಿಂದ ಸಾಕಷ್ಟು ಬಾರಿ ಹೇಳಿದರೂ ವಾರ್ಡ್ ಸದಸ್ಯರ ಗಮನಕ್ಕೆ ತಾರದೇ ಹಾಳಾದ ಬೋರ್‌ವೆಲ್ ದುರಸ್ತಿಗೆ ಬೇಕಾಬಿಟ್ಟಿ ಬಿಲ್ ನೀಡಲಾಗುತ್ತಿದೆ. ಪ್ರತಿಯೊಂದಕ್ಕೂ ಅಧ್ಯಕ್ಷರು ಮೌನ ವಹಿಸುತ್ತಾರೆ. ಇದು ಏಕೆ? ಎಂದು ಪಪಂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ನಾಗರಾಜ ಅಂಕೋಲೆಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅವರು ಸೋಮವಾರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಪ.ಪಂ. ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಿಪಿಎಸ್ ಇಲ್ಲದ ಪೋಟೋಗಳಿಗೆ ಬಿಲ್ ಮಾಡುತ್ತಾ ಹೋದರೆ ಹೇಗೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಪ್ರಶ್ನಿಸಿದರು. ಎಲ್ಲೇ ಪಂಪ್ ರಿಪೇರಿ ಇದ್ದರೂ ಆ ಸಂಬಂಧ ಸದಸ್ಯರ ಗಮನಕ್ಕೆ ತರಬೇಕು. ಒಂದು ರಿಪೇರಿಗೆ ಎರಡು ಬಾರಿ ಬಿಲ್ ಮಾಡುತ್ತೀರಾ? ಎಂದು ರಾಧಾಕೃಷ್ಣ ನಾಯ್ಕ ಪ್ರಶ್ನಿಸಿದರು.

ಕೆಲಸ ಮಾಡಿದವರಿಗೆ ಬಿಲ್ ಕೊಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಅದರಲ್ಲಿ ಕದ್ದು ಮುಚ್ಚಿ ಏಕೆ ವ್ಯವಹಾರ ನಡೆಸುತ್ತೀರಿ? ಎಂದಾಗ, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ಬಿಲ್ಲಿಗದ್ದೆ ರಸ್ತೆ ನಿರ್ವಹಣೆಗೆ ಅನುದಾನ ಕೇಳಿದರೆ ಪಪಂನಲ್ಲಿ ಅನುದಾನ ಇಲ್ಲ ಎಂದು ಮುಖ್ಯಾಧಿಕಾರಿ ಲಿಖಿತವಾಗಿ ತಿಳಿಸಿದ್ದಾರೆ. ಆದರೆ ಬೇರೆ ವಾರ್ಡ್‌ಗಳ ಕಾಮಗಾರಿಗೆ ಭರಪೂರ ಕ್ರಿಯಾಯೋಜನೆ ಆಗುತ್ತಿದೆ ಎಂದು ಸದಸ್ಯ ರಾಜು ನಾಯ್ಕ ಸಭೆಯಲ್ಲಿ ಘರ್ಷಣೆಗಿಳಿದರು.

ಸದಸ್ಯ ಸತೀಶ ನಾಯ್ಕ ಮಾತನಾಡಿ, ನಿಮ್ಮದೇ ಪಕ್ಷದ ತಾಲೂಕು ಅಧ್ಯಕ್ಷರು, ಎಂಎಲ್ಸಿ ಅವರಿಗೇ ಗೌರವ ಕೊಡದ ನೀವು, ಪಪಂ ಅಧ್ಯಕ್ಷರ ಆಡಳಿತ ಮಾತನಾಡುವ ನೈತಿಕತೆ ಇಲ್ಲ. ನಿಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದು ಸೋಮು ನಾಯ್ಕರ ಮಾತಿಗೆ ಆಕ್ಷೇಪಿಸಿದರು.

ನೀರು, ಪೈಪ್ ಲೈನ್ ವಿಷಯದಲ್ಲಿ ಟೆಂಡರ್ ಕರೆಯುವ ಪೂರ್ವದಲ್ಲಿ ಅಧಿಕೃತ ದರಪಟ್ಟಿ ಆಹ್ವಾನಿಸದೇ ಆನ್ಲೈನ್‌ನಲ್ಲಿ ಲೋಕೋಪಯೋಗಿ ಇಲಾಖೆಯ ದರಪಟ್ಟಿ ಡೌನ್‌ಲೋಡ್ ಮಾಡಿಕೊಂಡು ಕೊಟೇಷನ್ ಹೆಸರಿನಲ್ಲಿ ಸಭೆಯ ಅನುಮೋದನೆ ಪಡೆಯಲು ಮುಂದಾಗಿದ್ದೀರಾ? ನಾವೇನು ಅಷ್ಟೂ ತಿಳಿಯದೇ ಇರುವ ಕುರಿಗಳಾ ? ಎಂದು ಅಭಿಯಂತರ ಹೇಮಚಂದ್ರ ನಾಯ್ಕ ಅವರನ್ನು ಸತೀಶ ನಾಯ್ಕ, ರಾಧಾಕೃಷ್ಣ ನಾಯ್ಕ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ, ನನ್ನನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದೀರಿ. ಇದಕ್ಕೆ ನನ್ನ ಉತ್ತರ ಇಲ್ಲ. ನಾನು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಾಗ ಈ ವಿಷಯದಲ್ಲಿ ಮರು ಟೆಂಡರ್ ಕರೆದು, ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಾಧಿಕಾರಿ ಕುಮಾರ ನಾಯ್ಕ ಭರವಸೆ ನೀಡಿದರು.

ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ, ಸೋಮು ನಾಯ್ಕ ಇವರ ಪರಸ್ಪರ ಹೇಳಿಕೆಗಳು, ಗಲಾಟೆಗಳು ಸಭೆಯಲ್ಲಿ ಉಳಿಸ ಅನೇಕ ಸದಸ್ಯರು ಮೌನವಾಗಿ ಇರುವುದು ಕಂಡುಬಂತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಕುಮಾರ ನಾಯ್ಕ, ಪಪಂನ ಬಹುತೇಕ ಎಲ್ಲ ಸದಸ್ಯರು ಉಪಸ್ಥಿತರಿದ್ದರು.