ಸಾರಾಂಶ
ಬೆಂಗಳೂರು : ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಟ್ರಿನಿಟಿ ನಿಲ್ದಾಣದಲ್ಲಿ ನಿಂತ ಕಾರಣ ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಒಂದೂವರೆ ಗಂಟೆ ಸಂಚಾರ ವ್ಯತ್ಯಯವಾದ ಘಟನೆ ಗುರುವಾರ ನಡೆಯಿತು. ರೈಲುಗಳ ನಿಧಾನಗತಿಯ ಚಲನೆಯಿಂದ ಪರದಾಡಿದ ಪ್ರಯಾಣಿಕರು ಬಿಎಂಆರ್‌ಸಿಎಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಯಾಣಿಕರ ದಟ್ಟಣೆ ಅವಧಿಯಾದ ಬೆಳಗ್ಗೆ 9.58ರಿಂದ 11.30ರವರೆಗೆ ಮೆಟ್ರೋ ಕೈಕೊಟ್ಟಿದ್ದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಆದರೆ, ಈ ಬಗ್ಗೆ ಬಿಎಂಆರ್‌ಸಿಎಲ್ 11.25ಕ್ಕೆ ಪ್ರಯಾಣಕರಿಗೆ ‘ಎಕ್ಸ್’ ಮೂಲಕ ಮಾಹಿತಿ ನೀಡಿದ್ದು ಕೂಡ ಜನತೆಯ ಆಕ್ರೋಶಕ್ಕೆ ಕಾರಣವಾಯಿತು.
ಆಗಿದ್ದೇನು?:
ಬೈಯಪ್ಪನಹಳ್ಳಿ ನಿಲ್ದಾಣದಿಂದ ಬಂದಿದ್ದ ಈ ರೈಲಿನ ಗೀಯರ್ ಸ್ವಿಚ್ ಜಾಮ್ ಆಗಿತ್ತು. ಹೀಗಾಗಿ ಇಂದಿರಾನಗರ ನಿಲ್ದಾಣದಲ್ಲಿ 10 ನಿಮಿಷ ಬಾಗಿಲು ತೆಗೆಯಲಿಲ್ಲ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಈ ಬಗ್ಗೆ ರೈಲಿನೊಳಗೆ ಪ್ರಯಾಣಿಕರಿಗೆ ಸ್ಕ್ರೀನ್‌ನಲ್ಲಿ ಮಾಹಿತಿ ನೀಡಲಾಯಿತು. 9.58ರ ಹೊತ್ತಿಗೆ ಟ್ರಿನಿಟಿ ನಿಲ್ದಾಣದಲ್ಲಿ ರೈಲಿನ ಸಂಚಾರ ನಿಲ್ಲಿಸಲಾಯಿತು. ಮೆಟ್ರೋ ಎಂಜಿನಿಯರ್‌ಗಳು ಸ್ಥಳಕ್ಕೆ ಬಂದು ಬಾಗಿಲನ್ನು ತೆರೆಸಿದರು.
ಟ್ರಿನಿಟಿಯಲ್ಲಿ ಈ ವೇಳೆ ಎಲ್ಲ ಪ್ರಯಾಣಿಕರನ್ನು ಇಳಿಸಿದ ಬಳಿಕ ದೋಷಯುಕ್ತ ರೈಲನ್ನು ಪಾಕೆಟ್ ಟ್ರ್ಯಾಕ್‌ಗೆ ತಂದು ಅಲ್ಲಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಯಿತು. ಹೀಗಾಗಿ 10.30ರವರೆಗೆ ರೈಲುಗಳ ಸಂಚಾರ ಬಹುತೇಕ ಸ್ಥಗಿತವಾಗಿತ್ತು. ಸಿಗ್ನಲಿಂಗ್‌ಗೆ ಹೊಂದಿಕೊಳ್ಳುವ ತನಕ 11.30ರವರೆಗೆ ರೈಲುಗಳು ನಿಧಾನಗತಿಯಲ್ಲಿ ಸಂಚರಿಸಿದವು.
ಪ್ರಯಾಣಿಕರ ಪರದಾಟ
15-30 ನಿಮಿಷಗಳವರೆಗೆ ರೈಲುಗಳು ವಿಳಂಬವಾಗಿ ನಿಲ್ದಾಣವನ್ನು ತಲುಪುತ್ತಿದ್ದವು. ಇದರಿಂದ ಮೆಜೆಸ್ಟಿಕ್, ಹಲಸೂರು, ಇಂದಿರಾನಗರ ಸೇರಿ ಪ್ರಮುಖ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿತ್ತು. ಸುಮಾರು 8-10 ರೈಲುಗಳು ನಿಧಾನಗತಿಯ ಚಲನೆಯಿಂದ ಬೆಳಗ್ಗೆ ಕಚೇರಿ, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ತೊಂದರೆಗೀಡಾದರು.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮೆಟ್ರೋ ನಿಗಮದ ಕುರಿತು ಆಕ್ರೋಶ ಹೊರಹಾಕಿದರು. ನಿರಂತರವಾಗಿ ಮೆಟ್ರೋ ರೈಲುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದ್ದರೂ ಪರಿಹರಿಸುತ್ತಿಲ್ಲ. ಮೆಟ್ರೋ ಸಂಚಾರ ವ್ಯವಸ್ಥೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದು ಬೇಸರ ತೋಡಿಕೊಂಡರು.