ಅಕ್ರಮ ಚಟುವಟಿಕೆಗಳಿಗೆ ಮುಲಾಜಿಲ್ಲದೆ ಕಾನೂನು ಕ್ರಮ

| Published : Sep 12 2024, 01:50 AM IST

ಸಾರಾಂಶ

ಹೊಸದುರ್ಗ ತಾಲೂಕಿನ ಶ್ರೀರಾಂಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸ್‌ ನಿಲ್ದಾಣವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಗಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಸ್‌ ನಿಲ್ದಾಣ ಸಾರ್ವಜನಿಕ ಆಸ್ತಿ, ಸಾರ್ವಜನಿಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಯಾರಾದರೂ ಇಲ್ಲಿ ಅಕ್ರಮ ಚಟುವಟಿಕೆ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ತಾಲೂಕಿನ ಶ್ರೀರಾಂಪುರದಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ನೂತನ ಬಸ್‌ ನಿಲ್ದಾಣದ ಉದ್ಘಾಟನೆ, ಜಲ ಜೀವನ್‌ ಯೋಜನೆಯ ಭೂಮಿಪೂಜೆ, ಪೋಷಣ್‌ ಆಭಿಯಾನ, ಹೊಲಿಗೆ ಯಂತ್ರ ವಿತರಣೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಗಾಟನೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಸ್ವಾವಲಂಬಿಗಳಾದಾಗ ಮಾತ್ರ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ 11ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಡಲಾಗಿದೆ. ಇದನ್ನು ಸ್ಥಳೀಯ ಗ್ರಾಮಾಡಳಿತ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಪಂನ ಆರ್ಥಿಕ ಮೂಲವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.

ಜನರಿಂದ ಹೇಳಿಸಿಕೊಂಡು ಕೆಲಸ ಮಾಡುವ ವ್ಯಕ್ತಿ ನಾನಲ್ಲ ನನಗೆ ಮತಹಾಕಿದ ಮತದಾರರ ಮನದಾಳವನ್ನು ಅರಿತು ಕೆಲಸ ಮಾಡುವವನು. ಇಲ್ಲಿಯವರೆಗೂ ನಾನು ತಾಲೂಕಿನ ಆಭೀವೃದ್ಧಿಯ ಬಗ್ಗೆ ಯಾರಿಂದಲೂ ಹೇಳಿಸಿಕೊಂಡು ಕೆಲಸ ಮಾಡಿಲ್ಲ ನನ್ನ ಜನರಿಗೆ ಏನು ಬೇಕು ಎಂಬುದನ್ನು ಅರಿತು ಕೆಲಸ ಮಾಡಿದ್ದೇನೆ. ಅದರ ಪರಿಣಾಮವೇ ಇಡೀ ತಾಲೂಕಿಗೆ ನೀರು, ಬೆಳಕು. ರಸ್ತೆ ಅಬೀವೃದ್ಧಿ ಪಡಿಸಲು ಸಾಧ್ಯವಾಗಿದೆ ಎಂದರು.

*ನನ್ನ ರಾಜಕೀಯ ಕರ್ಮ ಭೂಮಿ ಶ್ರೀರಾಂಪುರ: ನನ್ನ ರಾಜಕೀಯ ಕರ್ಮ ಭೂಮಿ ಶ್ರೀರಾಂಪುರದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು, ಕೆರೆಗಳಿಗೆ ನೀರು ಒದಗಿಸಲು ಭದ್ರಾ ಯೋಜನೆಯನ್ನು ಅನುಷ್ಠಾನಗೊಳಿಸಿ ಈಗಾಗಲೇ ಕೆಲಸವೂ ಮುಕ್ತಾಯದ ಹಂತದಲ್ಲಿದೆ. ರೈತರಿಗೆ ತೊಂದರೆಯಾಗದಂತೆ ಹಗಲು ವೇಳೆ ವಿದ್ಯುತ್‌ ನೀಡಲು ಗರಗ ಬಳಿ ಸೋಲಾರ್‌ ಪಾರ್ಕ ನಿರ್ಮಾಣ, ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸರಬರಾಜಿಗೆ ಎಸ್‌ ನೇರಲಕೆರೆ ಬಳಿ ಮತ್ತೋಂದು ಎಂಯುಎಸ್‌ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಪಂ ಅಧ್ಯಕ್ಷೆ ಶ್ವೇತಾ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್‌ ಮುಖಂಡರಾದ ಆಗ್ರೋ ಶಿವಣ್ಣ, ದೀಪಿಕ, ಲೋಕೇಶ್ವರಪ್ಪ, ಆರ್‌.ದಾಸಪ್ಪ, ಜಿಪಂ ಮಾಜಿ ಅಧ್ಯಕ್ಷೆ ಗಿರಿಜಾ ಪೂಜಾರಿ ನಿಂಗಪ್ಪ, ಗ್ರಾಪಂ ಮಾಜಿ ಅಧ್ಯಕ್ಷರಾದ ಎಸ್‌.ಸಿ. ರಮೇಶ್‌, ಸುಮತಿ ನಿರಂಜನಮೂರ್ತಿ, ತಾಪಂ ಇಒ ಸುನಿಲ್‌ಕುಮಾರ್‌, ಶ್ರೀರಾಂಪುರ ಠಾಣೆ ಪಿಐ ಮಧು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹರೀಶ್‌ ಕುಮಾರ್‌, ಕುಡಿಯುವ ನೀರು ಇಲಾಕೆ ಎಇಇ ಧನಂಜಯ, ಪಿಡಿಒ ಪಾಲಾಕ್ಷಪ್ಪ, ಗ್ರಾಪಂ ಉಪಾಧ್ಯಕ್ಷ ಶಶಿಧರ, ಗ್ರಾಪಂ ಸದಸ್ಯರುಗಳು ಹಾಜರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್‌ ವೃತ್ತದಲ್ಲಿ ಜಲ ಜೀವನ್‌ ಯೋಜನೆಯ ಅನುಷ್ಠಾನಕ್ಕೆ ಭೂಮಿಪೂಜೆ ನೆರವೇರಿಸಿ, ನೂತನ ಬಸ್‌ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉದ್ಗಾಟಿಸಿದರು. ಫಲಾನಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

ತಾಲೂಕಿಗೆ ಭದ್ರಾ ನೀರು ಬರಲ್ಲ ಎನ್ನುವ ಮಾತುಗಳನ್ನು ವಿರೋಧಿಗಳು ಆಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ತಾಲೂಕಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರನ್ನು ತಂದೇ ತೀರುತ್ತೇನೆ.ಈ ಮಾತನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ ನನಗೆ ರಾಜಕೀಯ ಇಚ್ಛಾಶಕ್ತಿ ಇದೆ, ಭದ್ಧತೆಯಿದೆ. ನನ್ನ ರಾಜಕೀಯ ಜೀವನದಲ್ಲಿ ಸಾಧಿಸಿದ ಆತ್ಮ ಸಂತೋಷ ನನಗಿದೆ ಇದನ್ನು ಜನರು ಆರಿಯಬೇಕು. ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವಾಗ ಯೋಚಿಸಿ ಆಯ್ಕೆ ಮಾಡಿ ಎಂದರು.