ಸಾರಾಂಶ
ಅಥಣಿಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕಾದ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಅಥಣಿ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಂದ ಸುಮಾರು 60 ಗ್ರಾಮಗಳಿಗೆ ನೀರು ಶುದ್ಧೀಕರಿಸದೇ ನೇರವಾಗಿ ಹಾಗೇ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸಿ.ಎ.ಇಟ್ನಾಳಮಠ
ಕನ್ನಡಪ್ರಭ ವಾರ್ತೆ ಅಥಣಿಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕಾದ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಅಥಣಿ ತಾಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಘಟಕಗಳಿಂದ ಸುಮಾರು 60 ಗ್ರಾಮಗಳಿಗೆ ನೀರು ಶುದ್ಧೀಕರಿಸದೇ ನೇರವಾಗಿ ಹಾಗೇ ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಗ್ರಾಮೀಣ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಥಣಿ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಜಲಶುದ್ಧೀಕರಣ ಘಟಕ ಸ್ಥಾಪಿಸಿದೆ. ಬಳ್ಳಿಗೇರಿ ಮಧಬಾವಿ, ಐಗಳಿ ಕ್ರಾಸ್ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಸುಮಾರು 60 ಗ್ರಾಮಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೊರೈಸಲಾಗುತ್ತದೆ. 4 ತಿಂಗಳಿಂದ ಈ ಘಟಕಗಳಲ್ಲಿ ನೀರು ಶುದ್ಧೀಕರಣ ಮಾಡದೆ ನೇರವಾಗಿ ನದಿ ನೀರು ಪೊರೈಕೆ ಆಗುತ್ತಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.ಏಕೆ ಹಿಗಾಗುತ್ತಿದೆ?:
ಈ ಘಟಕಗಳ ಉಸ್ತುವಾರಿ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಇವರ ಮೇಲೆ ಇಲಾಖೆ ಅಧಿಕಾರಿಗಳು ಸರಿಯಾಗಿ ಉಸ್ತುವಾರಿ ನಿರ್ವಹಿಸದಿರುವುದಕ್ಕೆ ಯಡವಟ್ಟು ಆಗಿದೆ ಎಂದು ಹೇಳಲಾಗುತ್ತಿದೆ. ನೀರು ಶುದ್ಧೀಕರಣಕ್ಕೆ ಬಳಸಬೇಕಾದ ಬ್ಲೀಚಿಂಗ್ ಪೌಡರ್ (ನೀರನ್ನು ಫಿಲ್ಟರ್ ಮಾಡುವ ವೇಳೆ ಬಳಸುವ ಸಾಧನ) ಮತ್ತು ಅಲಮ್ ಕೆಮಿಕಲ್ಸ್ (ನೀರಿನಲ್ಲಿರುವ ಮಣ್ಣಿನ ಅಂಶ ತೆಗೆಯುವ) ಅನ್ನು ಬಳಕೆ ಮಾಡುತ್ತಿಲ್ಲ.ಸರ್ ನಾವು ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರು. ಸತ್ಯ ಹೇಳಲು ಆಗಲ್ಲ. ಅವರು ಪೌಡರ್ ನೀಡಿಲ್ಲ. ದಯವಿಟ್ಟು ಹೆಚ್ಚಿಗೆ ಏನೂ ಕೇಳಬೇಡಿ ಎಂದು ಕೆಲವು ಸಿಬ್ಬಂದಿ ಕೈ ಮುಗಿದು ಕೇಳಿಕೊಂಡರು. ಇಲಾಖೆಯ ಚಿಕ್ಕೋಡಿ ವಿಭಾಗದ ಮುಖ್ಯ ಎಂಜಿನಿಯರ್ ಪಾಂಡುರಂಗಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಅಥಣಿ ತಾಲೂಕಿನ ಸಾಹಾಯಕ ಎಂಜಿನಿಯರ್ ಅವರನ್ನು ಸಂಪರ್ಕಿಸಿ ವಿಚಾರಣೆ ಮಾಡುತ್ತೇನೆ ಎಂದಷ್ಟೇ ಹೇಳಿ ಕೈ ತೊಳೆದುಕೊಂಡರು.
ನನ್ನ ಹೆಸರಿನಲ್ಲಿ ಗುತ್ತಿಗೆ ಇದ್ದರೂ ಕಾಮಗಾರಿ ನಾನು ಮಾಡುತ್ತಿಲ್ಲ. ಸಬ್ ಕಾಂಟ್ರ್ಯಾಕ್ಟ (ಉಪ ಗುತ್ತಿಗೆ) ಮೂಲಕ ಕಾಮಗಾರಿ ನಿರ್ಮಾಣ ಬೇರೆಯವರಿಗೆ ನೀಡಿದ್ದು, ನನ್ನ ಹೆಸರಿನ ಮೇಲೆ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿವೆ. ಈ ಕುರಿತು ಸಬ್ ಗುತ್ತಿಗೆದಾರರನ್ನು ಕೇಳಿ ಹೇಳುತ್ತೇನೆ ಎಂದು ಮೂಲ ಗುತ್ತಿಗೆದಾರರು ಕೂಡ ಹೇಳಿದ್ದಾರೆ. ಮೂಲಗಳ ಪ್ರಕಾರ ತೆರೆಮೆರೆ ಹಿಂದೆ ಇಲಾಖೆ ಸಿಬ್ಬಂದಿ ಗುತ್ತಿಗೆದಾರರ ಹೆಸರಿನ ಮೇಲೆ ಕೆಲಸ ಮಾಡಿಸುತ್ತಿದ್ದಾರೆ ಎಂದು ಇಲಾಖೆಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅಥಣಿ ತಾಲೂಕಿನಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಫಿಲ್ಟರ್ ಮಾಡದೇ ಅಶುದ್ಧ ನೀರು ಪೂರೈಕೆ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ತಕ್ಷಣ ಇದರ ಬಗ್ಗೆ ತನಿಖೆ ಮಾಡಿ ವರದಿ ತರಿಸಿಕೊಂಡು ಅಗತ್ಯ ಕ್ರಮ ಜರುಗಿಸುತ್ತೇನೆ;-ರಾಹುಲ ಶಿಂಧೆ ಜಿಪಂ ಸಿಇಒ