ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಕೊಟ್ಟು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ೨೦೨೫- ೨೬ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ನೀಡಬೇಕಾದ ಅನುದಾನ ನೀಡದ ಕಾರಣ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸ್ಥಳೀಯ ಜನಪ್ರತಿನಿಧಿಗಳಿಲ್ಲದ ಗ್ರಾಮ ಪಂಚಾಯಿತಿಗಳು ಪರದಾಡುತ್ತಿರುವ ಪ್ರಸಂಗ ಎದುರಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ದೀಪ, ಗ್ರಾಮದ ಸ್ವಚ್ಛತೆ, ಚರಂಡಿ ಹೂಳೆತ್ತಿಸುವುದು, ರಸ್ತೆ ದುರಸ್ತಿ, ಕುಡಿಯುವ ನೀರಿನ ಸಾಮಗ್ರಿ ಖರೀದಿ, ಬೋರ್‌ ವೆಲ್‌ ಹಾಗೂ ಪೈಪ್‌ ಲೈನ್‌ ದುರಸ್ಥಿ, ವಿದ್ಯುತ್‌, ಟೆಲಿಫೋನ್‌ ಬಿಲ್ ಇನ್ನಿತರೆ ವಸ್ತುಗಳ ಖರೀದಿಗೆ ಜನರು ಕಟ್ಟುವ ತೆರಿಗೆ ಹಣ ಸಾಕಾಗುತ್ತಿಲ್ಲ.

ಇತ್ತ ೧೫ನೇ ಹಣಕಾಸು ಯೋಜನೆಯಡಿ ೨೦೨೫- ೨೬ನೇ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿಲ್ಲ. ಪ್ರಸಕ್ತ ಸಾಲಿಗೂ ಹಣ ಬಂದಿಲ್ಲ. ಹಾಗಾಗಿ ತಾಲೂಕಿನ ಬೆರಳೆಣಿಕೆ ಗ್ರಾಮ ಪಂಚಾಯಿತಿ ಹೊರತುಪಡಿಸಿ ಬಹುತೇಕ ಗ್ರಾಮ ಪಂಚಾಯಿತಿಗಳ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳು ನೆನಗುದಿಗೆ ಬಿದ್ದಿವೆ. ಅನುದಾನ ಇಲ್ಲದೆ ನಾನಾ ಪರವಾನಗಿ ನೀಡುವುದು, ಕೆಲಸದ ಬಿಲ್ ಪಾವತಿಸುವುದು ಕಷ್ಟವಾಗಿದೆ ಎಂದು ಬಿಡಿಸಿ ಬೇರೆ ಹೇಳಬೇಕಿಲ್ಲ.


ಸಮರ್ಪಕ ಹಂಚಿಕೆಯಾಗಿಲ್ಲ:

ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗೆ ನೀಡುವ ೧೫ನೇ ಹಣಕಾಸಿನ ಅನುದಾನ ರಾಜ್ಯ ಸರ್ಕಾರಕ್ಕೆ ನೀಡುತ್ತದೆ. ಆದರೆ, ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಎಂಬ ಆರೋಪದ ಜೊತೆಗೆ ಸರಿಯಾದ ಸಮಯಕ್ಕೆ ಅನುದಾನ ಕೊಡದಿದ್ದರೆ ಬಡ್ಡಿ ಸಮೇತ ಗ್ರಾಮ ಪಂಚಾಯಿತಿಗಳಿಗೆ ಕೊಡಬೇಕು ಎಂಬ ನಿಯಮಗಳು ಪಾಲನೆ ಆಗಿಲ್ಲ. ಅನುದಾನ ಬಳಕೆ ಪ್ರಮಾಣ ಪತ್ರ ರಾಜ್ಯ ಸರ್ಕಾರ ನೀಡದ ಕಾರಣ ಕೇಂದ್ರ ಸರ್ಕಾರ ೧೫ನೇ ಹಣಕಾಸು ಕೊಡುತ್ತಿಲ್ಲ ಎನ್ನಲಾಗಿದೆ.

ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಬರುವುದೇ ಕಡಿಮೆ. ಅಂಥ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪ ಖರೀದಿ, ಕುಡಿಯುವ ನೀರಿನ ಸಾಮಗ್ರಿ, ಬೋರ್‌ ವೆಲ್‌ ಹಾಗೂ ಪೈಪ್‌ ಲೈನ್‌ ದುರಸ್ಥಿಗೆ ಬೇಕಾದ ಸಾಮಗ್ರಿ ಖರೀದಿಗೆ ಪಿಡಿಒಗಳು ಸಾಲ ಮಾಡಿ ನಿಭಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರವಂತೂ ಗ್ರಾಮ ಪಂಚಾಯಿತಿಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡುವುದಿಲ್ಲ. ರಾಜ್ಯ ಹಣಕಾಸು ಆಯೋಗ ಗ್ರಾಮ ಪಂಚಾಯಿತಿಗಳಿಗೆ ನೀಡುವ ಅನುದಾನ ಗ್ರಾಮ ಪಂಚಾಯಿತಿ ನೌಕರರ ಸಂಬಳ ಹಾಗೂ ವಿದ್ಯುತ್‌(ಎಸ್ಕ್ರೋ ಖಾತೆ) ಜಮಾ ಆಗುತ್ತದೆ.೧೫ನೇ ಹಣಕಾಸು ಯೋಜನೆ ಅನುದಾನವನ್ನು ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು, ವಿದ್ಯುತ್ ದೀಪಗಳ ನಿರ್ವಹಣೆ, ರಸ್ತೆ, ಚರಂಡಿ, ಸ್ವಚ್ಛತೆ, ಹಸಿ ಕಸ- ಒಣ ಕಸ ನಿರ್ವಹಣೆ, ಶೇ.೨೫ ರಷ್ಟು ಎಸ್‌ಸಿ, ಎಸ್‌ಟಿ ವಿಶೇಷ ಘಟಕ ಕೆಲಸಗಳಿಗೆ, ಶೇ.೫ ರಷ್ಟು ವಿಶೇಷ ಚೇತನರು, ಶೇ.೫ರಷ್ಟು ಮಹಿಳೆಯರ ಕಲ್ಯಾಣಕ್ಕೆ, ಸೋರುವ ಶಾಲಾ ದುರಸ್ಥಿ ಸೇರಿ ಇನ್ನಿತರೆ ಕೆಲಸಗಳಿಗೆ ಬಳಕೆ ಆಗಬೇಕು.

ಈ ವರ್ಷವೂ ಅನುದಾನ ಬರಲ್ಲ?ಗ್ರಾಪಂ ಸದಸ್ಯರ ಅವಧಿ ಹಲವು ತಿಂಗಳ ಹಿಂದೆಯೇ ಮುಗಿದಿದೆ. ನಿಗದಿತ ಸಮಯಕ್ಕೆ ಚುನಾವಣೆ ನಡೆದು ಚುನಾಯಿತ ಜನಪ್ರತಿನಿಧಿಗಳು ಆಯ್ಕೆಯಾಗದಿದ್ದರೆ ೧೫ನೇ ಹಣಕಾಸು ಯೋಜನೆಯ ಬರುವುದಿಲ್ಲ ಎಂಬ ಮಾತಿದೆ. ಜೊತೆಗೆ ರಾಜ್ಯ ಸರ್ಕಾರ ಕಳೆದ ವರ್ಷದ ೧೫ನೇ ಹಣಕಾಸಿನ ಅನುದಾನ ಬಳಕೆ ಪ್ರಮಾಣ ಪತ್ರ ನೀಡದ ಕಾರಣ ೧೫ನೇ ಹಣಕಾಸು ಈ ವರ್ಷವೂ ಬರುವುದಿಲ್ಲ ಎನ್ನಲಾಗುತ್ತಿದೆ.

------

ತಾಲೂಕಿನ ಗ್ರಾಮಗಳಲ್ಲಿ ಹಲವು ಮೂಲ ಸೌಕರ್ಯ ಕಲ್ಪಿಸಲು ೧೫ನೇ ಹಣಕಾಸು ಯೋಜನೆ ಅನುದಾನ ಉಪಯೋಗವಾಗುತ್ತಿತ್ತು. ಆದರೆ, ಕಳೆದ ಸಾಲಿನಲ್ಲಿ ಅನುದಾನ ಬಾರದ ಕಾರಣ ಗ್ರಾಮಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿಗಳಿಂದ ಆಗುತ್ತಿಲ್ಲ.

-ಬಿ.ಸಿ.ಮಹದೇವಸ್ವಾಮಿ, ಗ್ರಾಪಂ ಮಾಜಿ ಸದಸ್ಯ

-----

೧೫ನೇ ಹಣಕಾಸು ಅನುದಾನ ಬಿಡುಗಡೆಯಾಗಿಲ್ಲ. ಗ್ರಾಮ ಪಂಚಾಯಿತಿಗಳು ಮೂಲ ಸೌಕರ್ಯ ಒದಗಿಸಲು ಆಗುತ್ತಿಲ್ಲ. ಪ್ರಸ್ತುತ ಬೇಸಿಗೆ ಕಾಲ ಆರಂಭವಾಗಿದ್ದು, ಕುಡಿಯುವ ನೀರು, ಬೀದಿ ದೀಪ ನಿರ್ವಹಣೆಯೇ ಕಷ್ಟವಾಗಿದೆ. ಪರಿಚಯಸ್ಥರ ಅಂಗಡಿಗಳಲ್ಲಿ ಸಾಲದ ರೂಪದಲ್ಲಿ ಸಾಮಗ್ರಿ ಖರೀದಿಸಲಾಗುತ್ತಿದೆ.

-ಹೆಸರೇಳಲಿಚ್ಚಿಸದ ಪಿಡಿಒ