ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇಶದಲ್ಲಿನ ದುಡಿಯುವ ವರ್ಗ ಜಾತಿ, ಧರ್ಮಗಳನ್ನು ಮೀರಿ ಒಂದಾದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸಿಪಿಐಎಂ ರಾಜ್ಯ ಮುಖಂಡ ಜಿ.ಎನ್.ನಾಗರಾಜ್ ಕರೆ ನೀಡಿದರು.ತಾಲೂಕಿನ ಬುಗತಗಹಳ್ಳಿ ಬಳಿಯ ಮದನ್ ಮೋಹನ್ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸಿಪಿಐ(ಎಂ) ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ದುಡಿಯುವ ಜನತೆ ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯಲು ಜಾತಿ, ಧರ್ಮದ ಗಡಿಗಳನ್ನು ಮೀರಿ ಒಂದಾಗಿ ಹೋರಾಡಬೇಕು ಎಂದು ಅಭಿಪ್ರಾಯಪಟ್ಟರು.ಮೋದಿ ಸರ್ಕಾರ ಕಾರ್ಪೋರೇಟ್ ಶ್ರೀಮಂತರಿಗೆ ದೇಶವನ್ನು ಬಲಿ ನೀಡುತ್ತಿದೆ. ಕಾರ್ಪೋರೆಟ್ ಲೂಟಿ ವಿರುದ್ಧ ದುಡಿಯುವ ಜನತೆ ಸಿಡಿದೇಳಬಾರದು ಎಂದು ಅವರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಒಗ್ಗಟ್ಟನ್ನು ಮುರಿಯಲಾಗುತ್ತಿದೆ ಎಂದು ದೂರಿದರು.
ಜನತೆಗೆ ಹೋರಾಟದ ಹಕ್ಕು ನೀಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ. ಅದಕ್ಕಾಗಿ ಚುನಾವಣಾ ಆಯೋಗ, ಸಂಸತ್ತು ಎಲ್ಲವನ್ನೂ ಮೋದಿ ಸರ್ಕಾರ ಅರ್ಥಹೀನಗೊಳಿಸುತ್ತಿದೆ ಎಂದು ಆರೋಪಿಸಿದರು.ಕಾರ್ಪೋರೇಟ್ ಪರವಾದ ಸರ್ಕಾರ ಮತ್ತು ಪಕ್ಷಗಳ ಪರವಾಗಿ ಬಡವರನ್ನು ಬಲೊಸಿಕೊಳ್ಳುತ್ತಿರುವ ಗ್ರಾಮೀಣ ಪ್ರದೇಶದ ಶ್ರೀಮಂತರ ಕೂಟದ ದಬ್ಬಾಳಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಸಿಪಿಐಎಂ ಗ್ರಾಮಾಂತರ ಪ್ರದೇಶಗಳಲ್ಲಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್.ಭರತ್ರಾಜ್ ಮತ್ತು ಮಳವಳ್ಳಿ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ ಉಪಸ್ಥಿತರಿದ್ದರು.