ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಎಚ್.ನಾಗೇಶ್ ಶನಿವಾರ ಚುನಾಯಿತರಾದರು.ಪಟ್ಟಣದ ಕ್ಷೇತ್ರ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಒಟ್ಟು 7 ಮತಗಳಲ್ಲಿ 4 ಮತಗಳು ಚಲಾವಣೆಯಾದವು. ಅಧ್ಯಕ್ಷರಾಗಿ ಎಚ್.ನಾಗೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಾವಣಿಯ ಆರ್.ಎನ್.ಚಂದ್ರಶೇಖರ್, ಖಜಾಂಚಿಯಾಗಿ ಎಂ.ಪಿ.ನಟರಾಜು 4 ಮತ ಪಡೆದು ಆಯ್ಕೆಯಾದರೆ, ಮಹಿಳಾ ಉಪಾಧ್ಯಕ್ಷರಾಗಿ ಎಂ.ನಾಗವೇಣಿ ರುದ್ರಸ್ವಾಮಿ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಕನ್ಯಾ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದಾಸೇಗೌಡ, ಖಜಾಂಚಿ ಬೋರಯ್ಯ ಶೂನ್ಯ ಮತಗಳೊಂದಿಗೆ ಪರಭಾವಗೊಂಡರು.ಎಚ್.ನಾಗೇಶ್ 2016 ಹಾಗೂ 2021ರಲ್ಲಿ ನಡೆದ ಚುನಾವಣೆಯಲ್ಲಿಯೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸತತ ಮೂರನೇ ಬಾರಿಗೆ ಗೆಲ್ಲುವ ಮೂಲಕ ತಾಲೂಕಿನ ಶಿಕ್ಷಕ ವಲಯದಲ್ಲಿ ತಮ್ಮ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ಪ್ರಶಾಂತ್ ಬಾಬು ಹಾಗೂ ಮಲ್ಲಿಕಾರ್ಜುನಸ್ವಾಮಿ ಕಾರ್ಯನಿರ್ವಹಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಚ್.ನಾಗೇಶ್ ಅವರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷ ಎಚ್.ನಾಗೇಶ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು ನನ್ನ ಮೇಲೆ ವಿಶ್ವಾಸವಿಟ್ಟು ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಶಿಕ್ಷಕರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು 100 ಕೋಟಿ ರು.ಅಧಿಕ ಸಿಎಸ್ಆರ್ ಅನುದಾನ ತಂದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ರಾಜ್ಯದಲ್ಲಿ ಮಾದರಿಯಾಗಿ ರೂಪಿಸಿದ್ದಾರೆ. ಅವರಿಗೆ ಬೆಂಬಲವಾಗಿ ನಾವೆಲ್ಲರೂ ನಿಲ್ಲಬೇಕಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಧಿಕಾರಿಗಳು ಕೂಡ ಸಾಕಷ್ಟು ಶ್ರಮಿಸುತ್ತಿದ್ದು, ಶಾಸಕರು ಹಾಗೂ ಅವರೊಂದಿಗೆ ಸೇರಿ ಸರ್ಕಾರಿ ಶಾಲೆಗಳ ಪ್ರಗತಿಗೆ ಶ್ರಮಿಸಲಾಗುವುದು. ಇಡೀ ಜಿಲ್ಲೆಯ ಎಲ್ಲ ತಾಲೂಕು ಸಂಘಗಳಲ್ಲಿಯೂ ಅವಿರೋಧವಾಗಿ ಆಯ್ಕೆಯಾಗಿದ್ದು, ತಾಲೂಕಿನ ಸಂಘಕ್ಕೆ ಮಾತ್ರ ನಡೆದ ಚುನಾವಣೆ ಬೇಸರ ತರಿಸಿದೆ ಎಂದರು.ಶಿಕ್ಷಕರಾದ ಮಹದೇವಸ್ವಾಮಿ, ಮಹೇಶ್, ರುದ್ರಸ್ವಾಮಿ, ಮರಿಸ್ವಾಮಿ ಪಾಲ್ಗೊಂಡಿದ್ದರು. ಮತದಾನದಿಂದ ದೂರ ಉಳಿಯದೆ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಜಾಗೃತಿ ಮೂಡಿಸಬೇಕಾದ ಶಿಕ್ಷಕರೇ ಶನಿವಾರ ನಡೆದ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.