ಸಾರಾಂಶ
ಕಾಡಾನೆಗಳನ್ನು ಕಾಡಿಗೆ ಓಡಿಸಲು ಹರಸಾಹಸ । ಕಾನ್ಕೆರೆ ಗ್ರಾಮದಲ್ಲಿ ಆನೆಗಳ ಹೆಜ್ಜೆ ಗುರುತು
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಕಾಡಾನೆ ಹಾವಳಿಗೆ ಜನರು ಆತಂಕದಲ್ಲೇ ದಿನ ದೂಡುವಂತಾಗಿದೆ.ಬಾಳೆಹೊನ್ನೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಕಾನ್ಕೆರೆ ಗ್ರಾಮದ ಹಲವು ತೋಟಗಳಿಗೆ ಶುಕ್ರವಾರ ರಾತ್ರಿ ವೇಳೆಯಲ್ಲಿ ಒಂದು ಕಾಡಾನೆ ದಾಳಿ ಮಾಡಿದ್ದು, ಹಲವು ತೋಟಗಳಲ್ಲಿ ತಿರುಗಾಡಿರುವ ಕುರಿತು ರೈತರು ಖಚಿತಪಡಿಸಿದ್ದಾರೆ. ಈ ಆನೆ ಪಟ್ಟಣದ ನಿರ್ಮಲಾ ಕಾನ್ವೆಂಟ್ ಹಿಂಭಾಗದ ತೋಟದಲ್ಲಿ ಬೀಡು ಬಿಟ್ಟಿರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದಾರೆ.ಇದರೊಂದಿಗೆ ಪಟ್ಟಣ ಸಮೀಪದ ಮಕ್ಕಿಮನೆ, ಕಾರ್‌ಗದ್ದೆ, ದೊಡ್ಡಹಡ್ಲು, ಕಣಬೂರು, ಮಾಗೋಡು, ಅಕ್ಷರನಗರ ಭಾಗದಲ್ಲಿಯೂ ಶುಕ್ರವಾರ ರಾತ್ರಿ ಎರಡು ಕಾಡಾನೆಗಳು ರೈತರ ಜಮೀನುಗಳಿಗೆ ದಾಳಿ ಮಾಡಿದ್ದು, ಶನಿವಾರವೂ ಹಲವು ತೋಟಗಳಲ್ಲಿ ಸಂಚರಿಸಿವೆ.ಎರಡು ಕಾಡಾನೆಗಳನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಎರಡು ಕಾಡಾನೆಗಳನ್ನು ಕಾಡಿಗೆ ಓಡಿಸಲು ಶನಿವಾರ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಕ್ಷರನಗರ ಗ್ರಾಮದವರೆಗೆ ತೆರಳಿದ ಕಾಡಾನೆಗಳು ಪುನಃ ವಾಪಾಸ್ ಕಾರ್‌ಗದ್ದೆಗೆ ಬಂದು ತೋಟವೊಂದರಲ್ಲಿ ಬೀಡು ಬಿಟ್ಟಿವೆ.ಬನ್ನೂರು ಗ್ರಾಪಂ ವ್ಯಾಪ್ತಿಯ ಜಕ್ಕಣಕ್ಕಿ ಹಾಗೂ ಅಣ್ಣಿಗದ್ದೆ ಎಂಬಲ್ಲಿಯೂ ಶುಕ್ರವಾರ ರಾತ್ರಿ ಆನೆಯೊಂದು ತೋಟಗಳಿಗೆ ಬಂದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.ಬಾಳೆಹೊನ್ನೂರು ಪಟ್ಟಣದ ಸನಿಹಕ್ಕೆ ಕಾಡಾನೆಗಳು ಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ. ಆನೆ ಓಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.ದಿನದಿಂದ ದಿನಕ್ಕೆ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚುಗೊಳ್ಳುತ್ತಿರುವುದಕ್ಕೆ ಕೃಷಿಕರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದು, ಅರಣ್ಯ ಸಚಿವರು, ಕ್ಷೇತ್ರದ ಶಾಸಕರು ಗಂಭೀರವಾಗಿ ಪರಿಗಣಿಸಿ ಈ ಭಾಗದಲ್ಲಿರುವ ಎಲ್ಲಾ ಆನೆಗಳನ್ನು ಸಾಮೂಹಿಕವಾಗಿ ಸ್ಥಳಾಂತರಿಸುವ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.೦೯ಬಿಹೆಚ್‌ಆರ್ ೧:
ಬಾಳೆಹೊನ್ನೂರು ಪಟ್ಟಣದ ಕಾನ್ಕೆರೆ ಗ್ರಾಮದ ತೋಟಕ್ಕೆ ಕಾಡಾನೆ ಬಂದಿರುವ ಹೆಜ್ಜೆ ಗುರುತು.೦೯ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಕಾರ್‌ಗದ್ದೆ ಗ್ರಾಮಕ್ಕೆ ಬಂದಿರುವ ಕಾಡಾನೆಗಳನ್ನು ಕಾಡಿಗೆ ಓಡಿಸಲು ಗ್ರಾಮಸ್ಥರು ಗಾಳಿಯಲ್ಲಿ ಗುಂಡು ಹಾರಿಸಲು ಕೋವಿ ಹಿಡಿದು ಕಾದು ಕುಳಿತಿರುವುದು೦೯ಬಿಹೆಚ್‌ಆರ್ ೩: ಬಾಳೆಹೊನ್ನೂರು ಸಮೀಪದ ಕಾರ್‌ಗದ್ದೆ ಗ್ರಾಮಕ್ಕೆ ಬಂದಿರುವ ಕಾಡಾನೆ ಓಡಿಸಲು ಸೇರಿರುವ ಗ್ರಾಮಸ್ಥರು.