ಸಾರಾಂಶ
ಕೊರಟಗೆರೆ ತಾಲೂಕಿನ ವಜ್ಜನಕೆರೆ ಗ್ರಾಮದಲ್ಲಿ ಅನೈರ್ಮಲ್ಯ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ವಜ್ಜನಕೆರೆ ಗ್ರಾಮದಲ್ಲಿ ಅನೈರ್ಮಲ್ಯತೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈಗಾಗಲೇ 2 ಮಕ್ಕಳು ಡೆಂಘೀ ಜ್ವರದಿಂದ ಬಳಲ ಚಿಕಿತ್ಸೆ ಪಡೆದು ಆಸತ್ರೆಯಿಂದ ವಾಪಸ್ಸಾದ್ದಾರೆ. ಆದರೂ ಜನರಲ್ಲಿ ಭಯ ಆವರಿಸಿದೆ. ಗ್ರಾಮ ಪಂಚಾಯಿತಿಗೆ ಗ್ರಾಮ ನೈರ್ಮಲ್ಯಕ್ಕೆ ಸರ್ಕಾರ ಲಕ್ಷಾಂತರ ರೂ ಅನುದಾನ ಬಿಡುಗಡೆಗೊಳ್ಳುತ್ತಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ೪- ೫ ವರ್ಷಗಳಾದರೂ ಚರಂಡಿ ಸ್ವಚ್ಛಗೊಳಿಸದೆ ಕೊಳೆತು ನಾರುತಿದ್ದು, ೨-೩ ಮಕ್ಕಳಿಗೆ ಡೆಂಘೀ ಜ್ವರ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದ ಕಡೆ ತಲೆ ಹಾಕದೆ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದ್ದು, ಮಡುಗಟ್ಟಿದ ಚರಂಡಿಯಲ್ಲಿನ ಸಾಂಕ್ರಾಮಿಕ ರೋಗ ತರುವ ಹುಳುಗಳು ಸೃಷ್ಟಿಯಾಗಿವೆ. ಚರಂಡಿಯಲ್ಲಿ ತ್ಯಾಜ್ಯ ಕೊಳೆತು ದುರ್ನಾಥ ಬರುತ್ತಿದ್ದು ಸೊಳ್ಳೆಗಳ ವಾಸಸ್ಥಾನಗಳಾಗಿ ನಾಗರೀಕರಿಗೆ ತೊಂದರೆಯಾಗಿದೆ. ಡೆಂಘೀ ಜ್ವರ ಕಂಡ ನಂತರ ನಾಮಕಾವಾಸ್ತೆ ಅರ್ಧಂಬರ್ಧ ಸ್ವಚ್ಛತೆ ಮಾಡಿ ಅದರ ಹೆಸರಿನಲ್ಲಿ ಹಣ ಕಬಳಿಸಲು ಹುನ್ನಾರ ನಡೆಯುತ್ತಿದೆ. ಮತ ಕೇಳಲು ಹಾಗೂ ತೆರಿಗೆ ಹಣ ಮಾತ್ರ ನಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊಳಚೆ ನೀರು ಶಾಲೆಗೆ
ಚರಂಡಿ ವ್ಯವಸ್ಥೆ ಇರದ ಕಾರಣ ಅಕ್ಕ ಪಕ್ಕದ ಮನೆಯ ಕೊಳಚೆ ನೀರು ಶಾಲೆಯ ಆವರಣಕ್ಕೆ ನುಗ್ಗುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಜ್ವರ ಕಾಡುತ್ತಿದ್ದು ಈಗಾಗಲೇ ಸಾಕಷ್ಟು ಮಕ್ಕಳು ಜ್ವರದಿಂದ ಚೇತರಿಸಿಕೊಂಡಿವೆ ಆದರೂ ಡೆಂಘೀ ಮಾರಿ ಭಯ ಕಾಡುತ್ತಿದೆ. ಮೈದಾನದಲ್ಲಿ ನೀರು ನಿಲ್ಲುತ್ತಿರುವುದರಿಂದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೂ ತೊಂದರೆಯಾಗಿದೆ.