ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಅ.25 ರಿಂದ ನ.3 ರವರೆಗೆ ನಡೆಯಲಿದೆ. ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ನಿರ್ದೇಶನ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆ ನಡೆಸಿ ಕಾಲಮಿತಿಯಲ್ಲಿ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ನಗರಾಭಿವೃದ್ಧಿ ಕೋಶ ಜೊತೆಗೆ ಪಂಚಾಯತ್ ರಾಜ್ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾಹಿತಿ ನೀಡಿ ಸರ್ವೋಚ್ಚ ನ್ಯಾಯಾಲಯ ತೀರ್ಪಿನ ಅನ್ವಯ ರಾಜ್ಯದಲ್ಲಿ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಸಮೀಕ್ಷೆಯನ್ನು ಕೈಗೊಂಡು ಕೇಂದ್ರ ಸರ್ಕಾರದ ‘ನಮಸ್ತೆ ಪೋರ್ಟಲ್’ನ ಎಂ.ಎಸ್.ಸರ್ವೇ ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.ಸಮೀಕ್ಷೆ ಸಂಬಂಧಿಸಿದಂತೆ ಅರ್ಜಿಯ ಮಾನ್ಯತೆ ಪರಿಶೀಲಿಸಿ ವ್ಯಾಲಿಡೇಟರ್ ಲಾಗ್‌ಇನ್‌ಗೆ ಕಳುಹಿಸಲು ಕ್ರಮವಹಿಸಬೇಕಿದೆ. ಹಾಗೆಯೇ ಸಮೀಕ್ಷಾ ಲಾಗಿನ್‌ನಿಂದ ಬಂದ ಅರ್ಜಿ ಪರಿಶೀಲಿಸಿ ಅರ್ಜಿಯ ನೈಜತೆ ಬಗ್ಗೆ ಖಾತರಿಪಡಿಸಿಕೊಂಡು ಪರಿಶೀಲಿಸಿ ಜಿಲ್ಲಾ ವ್ಯಾಲಿಡೇಟರ್ ಲಾಗಿನ್‌ಗೆ ಅರ್ಜಿ ಕಳುಹಿಸಬೇಕಿದೆ. ಸಮೀಕ್ಷೆ ಕಾರ್ಯದ ಅರ್ಜಿಯು ತಪ್ಪಾಗಿದ್ದಲ್ಲಿ ತಿರಸ್ಕರಿಸಬೇಕಿದೆ ಎಂದರು.
ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಮೀಕ್ಷೆಗಾರರಾಗಿ ನಗರ ಸ್ಥಳೀಯ ಸಂಸ್ಥೆಯ ಆರೋಗ್ಯಾಧಿಕಾರಿಗಳು, ಪರಿಶೀಲನಾ ಅಧಿಕಾರಿಗಳಾಗಿ ನಗರ ಸ್ಥಳೀಯ ಸಂಸ್ಥೆಯ ಸಹಾಯಕ ಅಭಿಯಂತರರು, ವ್ಯಾಲಿಡೇಟರಾಗಿ ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು, ಜಿಲ್ಲಾ ವ್ಯಾಲಿಡೇಟರ್ ಆಗಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಗ್ರಾಮೀಣ ಪ್ರದೇಶದಲ್ಲಿ ಸಮೀಕ್ಷೆಗಾರರಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪರಿಶೀಲನಾ ಅಧಿಕಾರಿಗಳಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರು, ವ್ಯಾಲಿಡೇಟರ್ ಆಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ವ್ಯಾಲಿಡೇಟರ್ ಆಗಿ ಜಿ.ಪಂ.ಉಪ ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.
ತಮ್ಮ ವ್ಯಾಪ್ತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಅರ್ಜಿಯನ್ನು ನಮಸ್ತೆ ಪೋರ್ಟಲ್‌ನಲ್ಲಿ ನಮೂದಿಸಲು ಕ್ರಮವಹಿಸಬೇಕಿದೆ ಎಂದು ಶೇಖರ್ ಮನವಿ ಮಾಡಿದರು.ಸಮಿತಿ ಸದಸ್ಯ ರಂಗಸ್ವಾಮಿ ಮಾತನಾಡಿ, ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ಧತಿ ಇನ್ನೂ ಜೀವಂತವಾಗಿದೆ. ಈ ಸಂಬಂಧ ಪರಿಶೀಲಿಸಿ ಅರ್ಹರನ್ನು ಗುರುತಿಸುವಂತೆ ಕೋರಿದರು.
ಸದಸ್ಯ ಆರ್ಮೂಗಂ ಮಾತನಾಡಿ, ಅನೈರ್ಮಲ್ಯ ಶೌಚಾಲಯ ಹಾಗೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅಗತ್ಯ ಕ್ರಮವಹಿಸಬೇಕಿದೆ ಎಂದರು.ಸದಸ್ಯರಾದ ಓಬಳಿ, ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಡಿವೈಎಸ್‌ಪಿ ರವಿ, ತಾ.ಪಂ.ಇಒ ಅಪ್ಪಣ್ಣ, ಪರಮೇಶ್ ಕುಮಾರ್, ಜಿ.ಪಂ.ಸಹಾಯಕ ನಿರ್ದೇಶಕರಾದ ಶ್ರೀನಿವಾಸ್, ಪೌರಾಯುಕ್ತ ಎಚ್.ಆರ್.ರಮೇಶ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪಿ.ಕೆ.ನಾಚಪ್ಪ, ರೀತು ಸಿಂಗ್ ಇತರರು ಇದ್ದರು.