ಬಸವರಾಜ ಹಿರೇಮಠ
ಧಾರವಾಡ:ಸರ್ಕಾರದ ಹಣವನ್ನು ಯಾವ ರೀತಿ ಪೋಲು ಮಾಡಬಹುದು ಎಂಬುದನ್ನು ಇಲ್ಲಿಯ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆಯಿಂದ ಅವೈಜ್ಞಾನಿಕವಾಗಿ ನಿರ್ಮಿಸಿರುವ ನೂತನ ಬಾಸ್ಕೆಟ್ ಬಾಲ್ ಮೈದಾನದಿಂದ ಕಲಿಯಬೇಕಿದೆ!
ಧಾರವಾಡದಲ್ಲಿ ಕರ್ನಾಟಕ ಕಾಲೇಜು, ಈಜುಗೊಳದ ಬಳಿ ಜೆಎಸ್‌ಎಸ್, ಶಾಂತಿಸದನ, ಕೃಷಿ ವಿವಿ ಸೇರಿದಂತೆ ಹತ್ತಕ್ಕೂ ಹೆಚ್ಚು ಬಾಸ್ಕೆಟ್ ಬಾಲ್ ಮೈದಾನಗಳಿವೆ. ಇಷ್ಟಾಗಿಯೂ ಕೆಲವು ರಾಜಕೀಯ ಮುಖಂಡರ ಒತ್ತಡದ ಹಿನ್ನೆಲೆಯಲ್ಲಿ ಕ್ರೀಡಾ ಇಲಾಖೆಯು ಸುಮಾರು ₹22 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಮೈದಾನ ಇದೀಗ ನಿಷ್ಪ್ರಯೋಜಕವಾಗಿದೆ. ಅವೈಜ್ಞಾನಿಕ ಮೈದಾನವಾಗಿರುವ ಕಾರಣ ನಿರ್ಮಾಣವಾಗಿ ಐದು ತಿಂಗಳಾದರೂ ಕ್ರೀಡಾಂಗಣಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಹೀಗಾಗಿ ಅಲ್ಲಿ ಮಕ್ಕಳು ಫುಟಬಾಲ್ ಇತರ ಆಟಗಳನ್ನು ಆಡುವಂತಾಗಿದೆ.ಫೆನ್ಸಿಂಗ್ ಕಿತ್ತಿದ್ದೇಕೆ?:
ನಿಯಮಾವಳಿ ಪ್ರಕಾರ ಮೈದಾನ ನಿರ್ಮಿಸದ ಹಿನ್ನೆಲೆಯಲ್ಲಿ ಲಕ್ಷಗಟ್ಟಲೇ ವೆಚ್ಚ ಮಾಡಿ ನಿರ್ಮಿಸಿರುವ ಮೈದಾನದ ಒಂದು ಬದಿಯ ಫೆನ್ಸಿಂಗ್ ಕಿತ್ತು ಹಾಕಲಾಗಿದೆ. ಜತೆಗೆ ಬಾಸ್ಕೆಟ್ ಬಾಲ್ ಪೋಲ್ ಮೈದಾನದ ಒಳಗಡೆ ಬದಲು ಹೊರಗಿದೆ. ಹೀಗಾಗಿ ಬಾಸ್ಕೆಟ್ ಬಾಲ್ ಪಂದ್ಯಕ್ಕೆ ಯೋಗ್ಯವಲ್ಲದ ಕಾರಣ ಚಿಕ್ಕಮಕ್ಕಳಿಗೆ ತರಬೇತಿಗಾಗಿ ಮಾತ್ರ, ನೆಪಕ್ಕಾಗಿ ಮೈದಾನ ಬಳಸುವ ಸ್ಥಿತಿ ಉಂಟಾಗಿದೆ ಎಂದು ಬಾಸ್ಕೆಟ್ ಬಾಲ್ ತರಬೇತುದಾರರೊಬ್ಬರು ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ದಾರಿಗೆ ಕೊಕ್ಕೆ:
ಇನ್ನು, ಧಾರವಾಡದಲ್ಲಿ ಇರುವ ಏಕೈಕ ಸ್ಕೇಟಿಂಗ್ ಮೈದಾನ ವಿಸ್ತರಿಸಬೇಕು ಎನ್ನುವ ಜಾಗದಲ್ಲಿ ಅನವಶ್ಯಕವಾಗಿ ಈ ಬಾಸ್ಕೆಟ್ ಬಾಲ್ ಮೈದಾನ ನಿರ್ಮಿಸಿರುವುದು ಸ್ಕೇಟರ್ಸ್ ಹಾಗೂ ಅವರ ಪಾಲಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೈದಾನ ನಿರ್ಮಿಸುವ ಸಮಯದಲ್ಲಿ ಎಚ್ಚರಿಸಿದರೂ ತರಾತುರಿಯಲ್ಲಿ ಯಾವ ಪುರುಷಾರ್ಥಕ್ಕಾಗಿ ಬಾಸ್ಕೆಟ್ ಬಾಲ್ ಮೈದಾನ ನಿರ್ಮಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಇದರಿಂದಾಗಿ ಸ್ಕೇಟಿಂಗ್ ಮೈದಾನಕ್ಕೆ ಪ್ರವೇಶಿಸುವ ದಾರಿಯು ಮುಚ್ಚಿ ಹೋಗಿದ್ದು, ಗುಡ್ಡ ಸುತ್ತಿ ಮೈಲಾರಕ್ಕೆ ಹೋದಂತೆ ಸ್ಕೇಟರ್ಸ್‌ಗಳು ಆರ್.ಎನ್. ಶೆಟ್ಟಿ ಮುಖ್ಯದ್ವಾರದ ಮೂಲಕ ಸುತ್ತು ಹಾಕಿ ಬರುವ ಸ್ಥಿತಿ ಉಂಟಾಗಿದೆ.ರಾಜಕೀಯ ಒತ್ತಡವೇಕೆ?:
ಧಾರವಾಡದಲ್ಲಿ ಹತ್ತಾರು ಬಾಸ್ಕೆಟ್ ಬಾಲ್ ಮೈದಾನಗಳಿವೆ. ಆದರೆ, ಇನ್ನೇನು 100 ಮೀಟರ್ ಸ್ಕೈಟಿಂಗ್ ಮೈದಾನವನ್ನು 200 ಮೀಟರ್‌ಗೆ ವಿಸ್ತರಿಸಬೇಕು ಎನ್ನುವಷ್ಟರಲ್ಲಿ ಅಡ್ಡಲಾಗಿ ಬಾಸ್ಕೆಟ್ ಮೈದಾನ ನಿರ್ಮಿಸಿರುವುದು ಅವೈಜ್ಞಾನಿಕ. ಇತ್ತ ಸ್ಕೇಟಿಂಗ್ ಕ್ರೀಡೆಗೂ ತೊಂದರೆ, ಅತ್ತ ಬಾಸ್ಕೆಟ್ ಮೈದಾನದ ಉದ್ದೇಶವೂ ಈಡೇರಲಿಲ್ಲ. ಯಾರದ್ದೋ ರಾಜಕೀಯ ಮುಖಂಡರ ಮಾತು ಕೇಳಿ ಈ ಹಿಂದಿನ ಕ್ರೀಡಾಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ಕ್ರೀಡಾಪಟುಗಳಿಗೆ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರ ಗಮನಕ್ಕೂ ತರಲಾಗಿದೆ. ಯಾವ ಪ್ರಯೋಜನವಾಗಿಲ್ಲ ಎಂದು ಸ್ಕೇಟಿಂಗ್ ಪಾಲಕರು ಕಳವಳ ವ್ಯಕ್ತಪಡಿಸಿದರು. ಎರಡರ ಮಧ್ಯೆ ಥ್ರೋಬಾಲ್?ಒಂದೆಡೆ ಸ್ಕೇಟಿಂಗ್ ಮೈದಾನಕ್ಕೂ ಪ್ರಯೋಜನವಲ್ಲದ, ಇನ್ನೊಂದೆಡೆ ಬಾಸ್ಕೆಟ್ ಬಾಲ್ ಪಂದ್ಯಕ್ಕೂ ಅನುಕೂಲ ಆಗದ ರೀತಿಯಲ್ಲಿರುವ ಬಾಸ್ಕೆಟ್ ಮೈದಾನ ಕ್ರೀಡಾಪಟುಗಳಿಗೆ ಬೇಸರ ಮೂಡಿಸಿದೆ. ಈ ಮಧ್ಯೆ ಈ ಎರಡು ಮೈದಾನದ ಮಧ್ಯೆ ಇರುವ ತುಸು ಖಾಲಿ ಜಾಗದಲ್ಲಿ ಥ್ರೋಬಾಲ್ ಮೈದಾನ ಮಾಡಲು ತಯಾರಿ ನಡೆದಿದೆ ಎಂಬ ಮಾಹಿತಿ ಇದ್ದು, ಇದೇ ರೀತಿ ಒಂದು ಕ್ರೀಡೆಯನ್ನು ಕೊಂದು ಮತ್ತೊಂದು ಕ್ರೀಡೆ ಬೆಳೆಸುವ ಕ್ರೀಡಾ ನೀತಿ ವಿರುದ್ಧ ಧಾರವಾಡದಲ್ಲಿ ಕ್ರೀಡಾಪಟುಗಳು ಹೋರಾಟಕ್ಕೆ ಸಜ್ಜಾಗುವುದು ಮಾತ್ರ ಬಾಕಿ ಇದೆ. ನಾನು ಅಧಿಕಾರ ಸ್ವೀಕರಿಸುವ ಮುಂಚೆಯೇ ಬಾಸ್ಕೆಟ್ ಬಾಲ್ ಮೈದಾನದ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ನಿರ್ಮಾಣವಾದ ಬಾಸ್ಕೆಟ್ ಮೈದಾನದಲ್ಲಿ ಒಂದು ಪಂದ್ಯಾವಳಿ ಮೂಲಕ ಚಾಲನೆ ನೀಡಲು ಸಿದ್ಧತೆ ನಡೆದಿದೆ. ಇನ್ನು, ಸ್ಕೇಟಿಂಗ್ ಮೈದಾನಕ್ಕೆ ದಾರಿ ಕೊಡುವ ಬಗ್ಗೆ ಪ್ರಸ್ತಾವನೆ ಹೋಗಿದ್ದು, ಸದ್ಯದಲ್ಲಿ ಅದು ಈಡೇರಲಿದೆ.
ಸದಾನಂದ ಅಮರಾಪುರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು