ಹೈಕ ಮೀಸಲು ಅವೈಜ್ಞಾನಿಕ ಜಾರಿ: ರಾಜ್ಯಪಾಲರಿಗೆ ಮನವಿಗೆ ನಿರ್ಧಾರ

| Published : May 12 2024, 01:24 AM IST / Updated: May 12 2024, 12:31 PM IST

Vidhana soudha
ಹೈಕ ಮೀಸಲು ಅವೈಜ್ಞಾನಿಕ ಜಾರಿ: ರಾಜ್ಯಪಾಲರಿಗೆ ಮನವಿಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೈದರಾಬಾದ್‌ ಕರ್ನಾಟಕ ಭಾಗದ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸುತ್ತಿದ್ದು, ಇದರಿಂದ ಇನ್ನುಳಿದ 24 ಜಿಲ್ಲೆಗಳ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ತೀರ್ಮಾನ

 ಬೆಂಗಳೂರು :  ಸಂವಿಧಾನಕ ಕಲಂ 371 ಜೆ ಅನ್ವಯ ಹೈದರಾಬಾದ್‌ ಕರ್ನಾಟಕ ಭಾಗದ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸುತ್ತಿದ್ದು, ಇದರಿಂದ ಇನ್ನುಳಿದ 24 ಜಿಲ್ಲೆಗಳ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಥ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಹಸಿರು ಪ್ರತಿಷ್ಠಾನ ಸಂಘಟನೆಯ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶನಿವಾರ ಪೀಣ್ಯ ದಾಸರಹಳ್ಳಿಯ ಚೊಕ್ಕಸಂದ್ರದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪ್ರತಿಷ್ಠಾನದ ಅಧ್ಯಕ್ಷ ಕೆ.ಜಿ.ಕುಮಾರ್‌, ‘371 ಜೆ ಕಾಯ್ದೆಗೂ ರಾಜ್ಯ ಸರ್ಕಾರ ಹೊರಡಿಸುತ್ತಿರುವ ಆದೇಶಗಳ ನಡುವೆ ವ್ಯತ್ಯಾಸವಿದೆ. ಇದರಿಂದ ರಾಜ್ಯದ 24 ಜಿಲ್ಲೆಗಳ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಉದ್ಯೋಗಿಗಳ ಬಡ್ತಿಯಲ್ಲಿ ಘೋರ ಅನ್ಯಾಯವಾಗುತ್ತಿದೆ. ಇದನ್ನು ವಿರೋಧಿಸಿ ಮೇ 13 ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಜೂ.1 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಶೋಧಕ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, 371 ಜೆ ಕಾಯ್ದೆ ಪ್ರಕಾರ ಶೇ.80 ರಷ್ಟನ್ನು ಸ್ಥಳೀಯವಾಗಿ ನೇಮಕಾತಿ ಮಾಡುವುದಲ್ಲದೆ ಉಳಿದ ಶೇ.20 ರಷ್ಟನ್ನೂ ಅವರಿಗೇ ಅವಕಾಶ ನೀಡಲಾಗುತ್ತಿದೆ. ಬಿಬಿಎಂಪಿ, ಬಿಡಿಎ ಮತ್ತಿತರ ಬೆಂಗಳೂರು ಕೇಂದ್ರೀಕೃತ ಸ್ಥಳೀಯ ಸಂಸ್ಥೆಗಳಲ್ಲೂ ಶೇ.8 ರಷ್ಟು ಅವಕಾಶ ನೀಡಿ ಮೆರಿಟ್ ಮತ್ತು ಜನರಲ್ ಕೆಟಗರಿಯನ್ನು ಸಹ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ಉದ್ಯೋಗಾಕಾಂಕ್ಷಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ನಾವು ಜಾಗೃತರಾಗಿ ಜನಾಂದೋಲನ ರೂಪಿಸಬೇಕು ಎಂದು ಸಲಹೆ ನೀಡಿದರು.

ಚಿಂತಕ ಎ.ಎಸ್.ಗೋವಿಂದೇಗೌಡ, ಪ್ರತಿಷ್ಠಾನದ ಪೋಷಕ ಕೆ.ಸಿ.ಶಿವರಾಮ್, ಉಪಾಧ್ಯಕ್ಷರಾದ ಲಕ್ಷ್ಮಿ ಶ್ರೀನಿವಾಸ್, ಮುಖಂಡರಾದ ಕೆ.ಪ್ರಕಾಶ್ ಗೌಡ, ಮಂಜುನಾಥ ರೆಡ್ಡಿ, ಗೋವಿಂದರಾಜು ಪಟೇಲ್, ರವೀಶ್‌ಗೌಡ ಪಾಲ್ಗೊಂಡಿದ್ದರು.