ಶಾಖಾಪುರ ರಸ್ತೆಯಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟ–ಮನರಂಜನೆಗಾಗಿ ಹೊಸದಾಗಿ ಅಳವಡಿಸಿರುವ ಆಟದ ಸಾಮಗ್ರಿಗಳು ಅವೈಜ್ಞಾನಿಕವಾಗಿ ಜೋಡಿಸಿರುವ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ಉದ್ಯಾನದಲ್ಲಿ ಮಕ್ಕಳ ಆಟ–ಮನರಂಜನೆಗಾಗಿ ಹೊಸದಾಗಿ ಅಳವಡಿಸಿರುವ ಆಟದ ಸಾಮಗ್ರಿಗಳು ಅವೈಜ್ಞಾನಿಕವಾಗಿ ಜೋಡಿಸಿರುವ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಆವರಣದಲ್ಲಿ ತೋಡಿರುವ ಗುಂಡಿಗಳು, ಮುರಿದು ಬಿದ್ದಿರುವ ಗೇಟ್, ಎಲ್ಲೆಂದರಲ್ಲಿ ಬೆಳೆದು ನಿಂತಿರುವ ಜಾಲಿಗಿಡಗಳು ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಉದ್ಯಾನ ಅಸ್ತವ್ಯಸ್ತವಾಗಿದೆ.

ಉದ್ಯಾನದಲ್ಲಿ ಮಕ್ಕಳಿಗಾಗಿ ಹಲವು ಆಟದ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳನ್ನು ಮಕ್ಕಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಸೂಕ್ತ ಅಂತರದಲ್ಲಿ ವೈಜ್ಞಾನಿಕವಾಗಿ ಜೋಡಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಗಿಡಗಳನ್ನು ನೆಡಲು ಅಲ್ಲಲ್ಲಿ ತೋಡಿರುವ ಗುಂಡಿಗಳನ್ನು ಮುಚ್ಚದಿರುವುದರಿಂದ ಮಕ್ಕಳು ಆಟವಾಡುವಾಗ ಎಡವಿ ಬಿದ್ದು ಗಾಯಗೊಳ್ಳುವ ಸಾಧ್ಯತೆಯಿದೆ.

ಮತ್ತೊಂದೆಡೆ, ಉದ್ಯಾನದ ಆವರಣದಲ್ಲಿ ಜಾಲಿಗಿಡಗಳು ಎಲ್ಲೆಂದರಲ್ಲಿ ಬೆಳೆದು ನಿಂತಿವೆ. ಅವುಗಳಲ್ಲಿರುವ ಮುಳ್ಳುಗಳು ಆಟವಾಡುವ ಮಕ್ಕಳ ಕಾಲಿಗೆ ಚುಚ್ಚುತ್ತಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.

ಉದ್ಯಾನದ ಸುತ್ತಲೂ ಕಾಂಪೌಂಡ್ ಹಾಗೂ ಜಾಲರಿ ವ್ಯವಸ್ಥೆ ಇದ್ದರೂ ಪ್ರವೇಶದ್ವಾರದ ಗೇಟ್ ಮುರಿದು ಬಿದ್ದಿದೆ. ಮಕ್ಕಳನ್ನು ಕರೆತರುವ ಪೋಷಕರು ಹಾಗೂ ಸಾರ್ವಜನಿಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಉದ್ಯಾನದ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಮಾಡಲಾಗುತ್ತಿದ್ದು, ಮಕ್ಕಳ ಮುಕ್ತ ಆಟಕ್ಕೆ ಅಡಚಣೆಯಾಗುತ್ತಿದೆ.

ಅಧಿಕಾರಿಗಳ ಗಮನಕ್ಕಿಲ್ಲ

ಉದ್ಯಾನದಲ್ಲಿ ಆಟದ ಸಾಮಗ್ರಿಗಳನ್ನು ಅಳವಡಿಸಿರುವ ವಿಷಯವೇ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂಬುದು ಗಮನಾರ್ಹ. ಸಾರ್ವಜನಿಕ ಬಳಕೆಯ ಉದ್ಯಾನದಲ್ಲಿ ಮಕ್ಕಳಿಗಾಗಿ ಆಟದ ಸಾಮಗ್ರಿಗಳನ್ನು ಅಳವಡಿಸಿದರೂ ಅದರ ನಿರ್ವಹಣೆ ಹಾಗೂ ಸುರಕ್ಷತೆ ಕುರಿತು ಅಧಿಕಾರಿಗಳ ಗಮನ ಹರಿದಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಉದ್ಯಾನದಲ್ಲಿ ಆಟದ ಸಾಮಗ್ರಿಗಳನ್ನು ಅಳವಡಿಸಿರುವುದು ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಉದ್ಯಾನದ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಉದ್ಯಾನದಲ್ಲಿ ಆಟದ ಸಾಮಗ್ರಿಗಳನ್ನು ಅಳವಡಿಸಿರುವುದು ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಈ ಕುರಿತು ಗಮನ ಹರಿಸಲಾಗುವುದು. ಉದ್ಯಾನದ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ತಿಳಿಸಿದ್ದಾರೆ.

ಮಕ್ಕಳ ಮನರಂಜನೆಗಾಗಿ ಆಟದ ಸಾಮಗ್ರಿಗಳನ್ನು ಅಳವಡಿಸಿರುವುದು ಖುಷಿಯ ಸಂಗತಿ. ಆದರೆ ಅವುಗಳನ್ನು ಸುರಕ್ಷಿತವಾಗಿ ಮರುಜೋಡಿಸಬೇಕು. ಗುಂಡಿಗಳನ್ನು ಮುಚ್ಚಿ, ಜಾಲಿಗಿಡಗಳನ್ನು ತೆರವುಗೊಳಿಸಿ, ಮುರಿದ ಗೇಟ್ ದುರಸ್ತಿಪಡಿಸಬೇಕು. ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಉದ್ಯಾನವನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕಿದೆ ಎನ್ನುತ್ತಾರೆ ಪಟ್ಟಣದ ನಿವಾಸಿಗಳು.