ಅವೈಜ್ಞಾನಿಕ ರಸ್ತೆ ನಿರ್ಮಾಣ: ಸಾರ್ವಜನಿಕರ ಆಕ್ರೋಶ

| Published : Feb 26 2024, 01:34 AM IST

ಸಾರಾಂಶ

ರಸ್ತೆ ಅಗಲೀಕರಣ ನಿರ್ಮಾಣ ಮಾಡುವ ನೆಪದಲ್ಲಿ ಪುರಸಭೆ ಮಳಿಗೆಗಳನ್ನು ಕೆಡವಿದ ಇಲ್ಲಿನ ಆಡಳಿತ ಈಗ ಟಿಎಪಿಸಿಎಂಎಸ್ ಕಟ್ಟಡ ಹಾಗು ಅಂಚೆಕಚೇರಿ ಕಾಂಪೌಂಡ್ ಕೆಡವಲು ಹಿಂದೇಟು ಹಾಕುತ್ತಿದೆ

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ

ಇಲ್ಲಿಯ ಅಂಚೆಕಚೇರಿ ರಸ್ತೆ ನಿರ್ಮಾಣ ಅವೈಜ್ಞಾನಿಕ ಎಂದು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂತಹ ರಸ್ತೆ ನಿರ್ಮಾಣದ ಅಗತ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಜನ ಸಂಚಾರ, ವಾಹನ ಸಂಚಾರ ದಿನೇದಿನೇ ಏರುತ್ತಿರುವ ಹಿನ್ನಲೆಯಲ್ಲಿ ರಸ್ತೆ ಆದಷ್ಟು ವಿಶಾಲವಾಗಿರಬೇಕು, ಗುಣಮಟ್ಟದಾಗಿರಬೇಕು. ಆದರೆ ಅಂಚೆಕಚೇರಿ ರಸ್ತೆ ನಿರ್ಮಾಣ ಇದಕ್ಕೆ ತದ್ವಿರುದ್ಧವಾಗಿದೆ.

ಚಿಕ್ಕ ರಸ್ತೆ ನಿರ್ಮಾಣ

ಪುರಸಭೆ ಕಚೇರಿ ಪಕ್ಕದಲ್ಲೆ ಇರುವ ಅಂಚೆಕಚೇರಿ ರಸ್ತೆ ಮೂಲಕ ವೆಂಕಟೇಶ್ವರ ಬಡಾವಣೆ, ಕೊಳ್ಳುರು ಹೊಸ ಬಡಾವಣೆ ಮತ್ತು ಝಾಕೀರ್ ಹುಸೇನ್ ಮೊಹಲ್ಲಾ ಜನರು ಪಟ್ಟಣಕ್ಕೆ ಆಗಮಿಸಲು ಸಂಪರ್ಕ ರಸ್ತೆಯಾಗಿ ಬಳಕೆ ಮಾಡುತ್ತಾರೆ ಎರಡು ಮೂರು ಬಡಾವಣೆ ಜನರು ಬಳಸುವ ರಸ್ತೆ ವಿಶಾಲವಾಗಿದ್ದರೆ ಸುಗಮ ಸಂಚಾರಕ್ಕೆ ಅನಕೂಲವಾಗಲಿದೆ. ಆದರೆ ಇಲ್ಲಿ ನಿರ್ಮಿಸುತ್ತಿರುವುದು ಸಿಂಗಲ್‌ ರಸ್ತೆ.ಆದರೆ ಅಗಲವಾಗಿ ವಿಶಾಲವಾದ ರಸ್ತೆ ನಿರ್ಮಾಣ ಮಾಡಲು ಗುರುತಿಸಿದ್ದ ಜಾಗದಲ್ಲಿ ಅನಾವಶ್ಯಕವಾಗಿ ಮೋರಿ ನಿರ್ಮಿಸಿ ಉಳಿದಂತ ಕಿರಿದಾದ ಜಾಗದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಅಗಲವಾದ ರಸ್ತೆ ನಿರ್ಮಾಣ ಮಾಡುವ ನೆಪದಲ್ಲಿ ಪುರಸಭೆ ಮಳಿಗೆಗಳನ್ನು ಕೆಡವಿದ ಇಲ್ಲಿನ ಆಡಳಿತ ಈಗ ಟಿಎಪಿಸಿಎಂಎಸ್ ಕಟ್ಟಡ ಹಾಗು ಅಂಚೆಕಚೇರಿ ಕಾಂಪೌಂಡ್ ಕೆಡವಲು ಹಿಂದೇಟು ಹಾಕುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಶಕದ ಬಳಿಕ ಶುರುವಾದ ಕಾಮಗಾರಿ

ಒಂದು ದಶಕದಿಂದ ಅಂಚೆಕಚೇರಿ ರಸ್ತೆ ನಿರ್ಮಾಣಕ್ಕೆ ಕಾಲಕೂಡಿಬಂದಿರಲಿಲ್ಲ. ಧೂಳು, ಹಳ್ಳಕೊಳ್ಳದ ರಸ್ತೆಯಲ್ಲಿ ಜನತೆ ಆಡಳಿತಕ್ಕೆ ಶಾಪ ಹಾಕುತ್ತ ಸಂಚರಿಸುತ್ತಿದ್ದರು. ಈಗ ಮತ್ತೆ ರಸ್ತೆ ನಿರ್ಮಾಣ ಕಾರ್ಯ ಶುರುವಾಗಿದೆ. ಈಗಲೂ ಕೆಲ ಪ್ರತಿಷ್ಟಿತರ ಅಡ್ಡಗಾಲು ಹಾಕುತ್ತಿರುವ ಪರಿಣಾಮ ಅಂಚೆಕಚೇರಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ. ಇಂತಹ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿಗಳು ಬಂದು ವಿಕ್ಷಿಸಿ ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.