ಅವೈಜ್ಞಾನಿಕ ಕಾಮಗಾರಿ: ಕೋಟೆ ಗೋಡೆ ಕುಸಿತ

| Published : Aug 20 2024, 12:47 AM IST

ಸಾರಾಂಶ

ಅವೈಜ್ಞಾನಿಕ ಕಾಮಗಾರಿ: ಕೋಟೆ ಗೋಡೆ ಕುಸಿತ

ಕನ್ನಡಪ್ರಭ ವಾರ್ತೆ ಪಾವಗಡ

ಕಟ್ಟಡ ನಿರ್ಮಾಣಕ್ಕೆ ಅವೈಜ್ಞಾನಿಕ ರೀತಿಯಲ್ಲಿ ಪರವಾನಿಗೆ ನೀಡಿದ ಪರಿಣಾಮ ಪಟ್ಟಣದ ಐತಿಹಾಸಿಕ ಕೋಟೆಯ ಗೋಡೆ ಕುಸಿದ ಘಟನೆ ಸೋಮವಾರ ನಡೆದಿದೆ. ಪಟ್ಟಣದ ಅಂಚೆ ಕಚೇರಿ ಸಮೀಪದ ಕೋಟೆ ಗೋಡೆ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಅಸ್ತು ಎಂದ ಪರಿಣಾಮ ಕಟ್ಟಡ ನಿರ್ಮಾಣ ಮಾಡುತ್ತಿದ್ದ ವ್ಯಕ್ತಿ ಗೋಡೆಗೆ ಹತ್ತಿರದಲ್ಲಿಯೇ ಕೊಳವೆ ಬಾವಿ ಕೊರೆಸಿದ್ದು ಹಾಗೂ ಜೆಸಿಬಿಯಿಂದ ಅಗೆಯಲಾಗಿದೆ. ಅದರಿಂದ ಕೋಟೆಗೆ ಹಾನಿಯಾಗಿ ಕೋಟೆಯ ಕಲ್ಲುಗಳು ನೆಲಕ್ಕುರಳಿವೆ. ಸುಮಾರು 10 ಅಡಿ ಎತ್ತರದ ಕೋಟೆ ಗೋಡೆ ಇದಾಗಿದ್ದು, ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸ್ಥಳದಲ್ಲಿ ಧರಣಿ ನಡೆಸಿದ ದಲಿತ ಮುಖಂಡರಾದ ಕನ್ನಮೇಡಿ ಎನ್‌.ಕೃಷ್ಣಮೂರ್ತಿ ಹಾಗೂ ಇತರರು ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಕಾನೂನು ರೀತಿ ಕ್ರಮಕ್ಕೆ ಕೈಗೊಳ್ಳಬೇಕು ಹಾಗೂ ಬಿದ್ದಿರುವ ಕೋಟೆ ಗೋಡೆಯನ್ನು ಮರಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಧರಣಿ ವಿಷಯ ತಿಳಿದು ಸ್ಥಳಕ್ಕೆ ಬಂದ ತಹಸೀಲ್ದಾರ್‌ ಕಟ್ಟಡ ನಿರ್ಮಾಣಕ್ಕೆ ಆವೈಜ್ಞಾನಿಕ ಪರವಾನಿಗೆ ನೀಡಿದ್ದ ಹಿನ್ನಲೆಯಲ್ಲಿ ಕೋಟೆ ಕಲ್ಲು ಕುಸಿದು ಬಿದ್ದಿವೆ. ಕೋಟೆಗೆ 8 ಅಡಿ ಜಾಗಬಿಟ್ಟು ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ನಿಯಮನುಸಾರ ಕ್ರಮ ವಹಿಸಬೇಕು. ಕೋಟೆ ಶಿಥಿಲತೆಗೆ ಕಾರಣರಾದವರಿಂದ ಕೋಟೆ ನಿರ್ಮಿಸಿದ ಬಳಿಕ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ಇದೇ ವೇಳೆ ಸಮಾಜ ಸೇವಕ ಬೇಕರಿ ನಾಗರಾಜ್‌, ದಲಿತ ಮುಖಂಡ ಎನ್.ಡಿ.ದುಗ್ಗಪ್ಪ ಇತರೆ ಆನೇಕ ಮಂದಿ ಸಂಘಟನೆಯ ಮುಖಂಡರಿದ್ದರು.