ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಂಗಾಲಾದ ರೈತನೊಬ್ಬ ಅಪಾರ ವೆಚ್ಚದಲ್ಲಿ ಬೆಳೆಸಿದ್ದ 11 ಎಕರೆ ಗೋವಿನ ಜೋಳ ಬೆಳೆಯನ್ನು ಟ್ರ್ಯಾtಕ್ಟರ್ ಕುಂಟೆ ಮೂಲಕ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.
ಬ್ಯಾಡಗಿ:ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಂಗಾಲಾದ ರೈತನೊಬ್ಬ ಅಪಾರ ವೆಚ್ಚದಲ್ಲಿ ಬೆಳೆಸಿದ್ದ 11 ಎಕರೆ ಗೋವಿನ ಜೋಳ ಬೆಳೆಯನ್ನು ಟ್ರ‍್ಯಾಕ್ಟರ್ ಕುಂಟೆ ಮೂಲಕ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಶಿಡೇನೂರ ಗ್ರಾಮದಲ್ಲಿ ನಡೆದಿದೆ.
ಶಿಡೇನೂರ ಗ್ರಾಮದ ರೈತ ಕಿರಣಕುಮಾರ ಗಡಿಗೋಳ ಬೆಳೆ ನಾಶಪಡಿಸಿದ ರೈತ. ಎಷ್ಟೇ ಕಾದರೂ ಮಳೆ ಬಾರದೆ ಬೆಳೆ ಒಣಗಿ ಹೋಗುತ್ತಿರುವುದನ್ನು ನೋಡಿ ಕಂಗಾಲಾಗಿ ಬೆಳೆ ನಾಶ ಮಾಡಿದ್ದಾರೆ.11 ಎಕರೆ ಲಾವಣಿ ಹೊಲ ನಾಶ: ಕಿರಣಕುಮಾರ ಗಡಿಗೋಳ ತಮ್ಮ ಸ್ವಂತ ಜಮೀನಿನ ಜೊತೆಗೆ ಲಾವಣಿ ಪಡೆದ ಜಮೀನು ಸೇರಿ ಒಟ್ಟು 11 ಎಕರೆ ಪ್ರದೇಶದಲ್ಲಿ ಗೋವಿನ ಜೋಳ ಬೆಳೆ ಬೆಳೆದಿದ್ದರು, ಪೂರ್ವ ಮುಂಗಾರು ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ನಿರೀಕ್ಷೆ ಹೊಂದಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದು ಇದರಿಂದ ಬೇಸತ್ತು ಬೆಳೆ ನಾಶದ ನಿರ್ಧಾರ ಮಾಡಿದ್ದಾರೆ.
₹2 ಲಕ್ಷ ನಷ್ಟ: ಸುಮಾರು 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಹಣ ಹೂಡಿಕೆ ಮಾಡಿದ್ದರು. ಆದರೆ, ಬಿತ್ತನೆ ಬಳಿಕ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಬೆಳೆ ಒಣಗಿ ಹೋಗಿದ್ದು, ಹೂಡಿಕೆ ಮಾಡಿದ ಹಣವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ತೀವ್ರ ನಿರಾಶೆಗೊಂಡ ರೈತ ಕಿರಣಕುಮಾರ ಗಡಿಗೋಳ ಟ್ರ‍್ಯಾಕ್ಟರ್‌ನಿಂದ ಕುಂಟೆ ಹೊಡೆಸಿ ಸಂಪೂರ್ಣ ಬೆಳೆ ನಾಶಪಡಿಸಿದ್ದಾರೆ.ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಅಭಾವ ಮುಂದುವರಿದರೆ ಕೃಷಿ ಆಧಾರಿತ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಯಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ, ಸಾಲ ಮರುಪಾವತಿ ಅವಧಿ ವಿಸ್ತರಣೆ ಹಾಗೂ ಅಗತ್ಯ ನೆರವು ನೀಡುವಂತೆ ರೈತರಾದ ಶಿವಪ್ಪ ತೆವರಿ, ಪ್ರಭು ಬಿದರಿ, ಗಣೇಶ ಯೋಗಿಕೊಪ್ಪ, ಶಂಭು ಭಾವಿಕಟ್ಟಿ, ಮಲ್ಲಿಕಾರ್ಜುನ ದುರ್ಗದ, ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಕೃಷಿಗೆ ಮಾಡಿದ ಎಲ್ಲ ಹೂಡಿಕೆ ಮಣ್ಣಾಯಿತು. ಸಾಲ ಮಾಡಿ ಕೃಷಿ ಮಾಡಿದ್ದೇವೆ. ಮಳೆ ಕೈಕೊಟ್ಟಿದ್ದರಿಂದ ಬದುಕೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ರೈತರಿಗೆ ನೆರವಾಗಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಜೊತೆಗೆ ಹಸಿರು ಬರಗಾಲ ಎಂದು ಘೋಷಿಸಿ ಜಿಲ್ಲೆಯ ರೈತರಿಗೆ ವಿಶೇಷ ನೆರವು ನೀಡಬೇಕು ಎಂದು ಶಿಡೆನೂರ ರೈತ ಕಿರಣಕುಮಾರ ಗಡಿಗೋಳ ಹೇಳಿದರು.