ತೊಗರಿ ಗಿಡದಲ್ಲಿ ಕಟ್ಟದ ಕಾಳು: ರೈತರ ಆಕ್ರೋಶ

| Published : Dec 27 2024, 12:49 AM IST

ಸಾರಾಂಶ

ಕಳಪೆ ಬಿತ್ತನೆ ಬೀಜ ವಿತರಣೆ ಹಿನ್ನಲೆ ತೊಗರಿ ಬೆಳೆಗಾರನಿಗೆ ಆಗಿರುವ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದರು.

ಕಳಪೆ ಬಿತ್ತನೆ ಬೀಜ ಪೂರೈಕೆ ಆರೋಪ । ಸೂಕ್ತ ಪರಿಹಾರಕ್ಕೆ ಆಗ್ರಹ । ತೊಗರಿ ಗಿಡದ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಕನ್ನಡಪ್ರಭವಾರ್ತೆ ಚಿತ್ರದುರ್ಗ ಕಳಪೆ ಬಿತ್ತನೆ ಬೀಜ ವಿತರಣೆ ಹಿನ್ನಲೆ ತೊಗರಿ ಬೆಳೆಗಾರನಿಗೆ ಆಗಿರುವ ನಷ್ಟಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಪರಿಹಾರ ನೀಡುವಂತೆ ಆಗ್ರಹಿಸಿದರು.ಕಳೆದ ಮುಂಗಾರು ಹಂಗಾಮಿನಲ್ಲಿ ಚಿತ್ರದುರ್ಗ ತಾಲೂಕಿನ ಕೋಗುಂಡೆ ನಾಗರಾಜಪ್ಪ ಎಂಬುವರು ಕೃಷಿ ಇಲಾಖೆಯಲ್ಲಿ ತೊಗರಿ ಬಿತ್ತನೆ ಬೀಜ ಖರೀದಿಸಿ, ಬಿತ್ತನೆ ಮಾಡಿದ್ದು ಕೊಯ್ಲು ಅವಧಿ ಮುಗಿಯತ್ತಾ ಬಂದರೂ ಹೂ ಬಿಡದೆ, ಕಾಳು ಕಟ್ಟದೆ ಬರೀ ಗಿಡ ಮಾತ್ರ ಎತ್ತರಕ್ಕೆ ಬೆಳೆದಿದೆ. ಇವತ್ತಲ್ಲಾ ನಾಳೆ ಹೂ ಬಿಡಬಹುದೆಂಬ ರೈತನ ನಿರೀಕ್ಷೆ ಹುಸಿಯಾಗಿದ್ದು, ತೊಗರಿ ಫಸಲು ಮರೀಚಿಕೆಯಾಗಿದೆ ಎಂದು ರೈತರು ಆರೋಪಿಸಿದರು.ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಇದುವರೆಗೂ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ರೈತ ನಷ್ಟ ಅನುಭವಿಸುತ್ತಿದ್ದ. ಆದರೆ ಬಿತ್ತನೆ ಬೀಜದಲ್ಲೂ ಮೋಸವಾದರೆ ಅವರು ಎಲ್ಲಿಗೆ ಹೋಗಬೇಕು. ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಲ್ಲಿ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.ಲಕ್ಷಾಂತರ ರುಪಾಯಿ ಸಾಲ ಮಾಡಿ ಬಿತ್ತನೆ ಮಾಡಿದ ರೈತ ನಾಲ್ಕು ಕಾಸು ಬರುತ್ತದೆ ಎಂಬ ಕಾರಣಕ್ಕೆಆಸೆ ಕಣ್ಣಿನಿಂದ ಕಾಯುತ್ತಾರೆ. ಅದರಿಂದಲೇ ಬದುಕು ಕಟ್ಟಿಕೊಂಡಿರುತ್ತಾನೆ. ಕಳಪೆ ಬಿತ್ತನೆ ಬೀಜ ವಿತರಿಸಿ ನಷ್ಟವನ್ನುಂಟು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ರೈತರಿಗೆ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು.ಕಳೆದ ಎರಡು ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಸೃಷ್ಟಿಯಾಗಿ ಸಹಸ್ರಾರು ಎಕರೆ ಪ್ರದೇಶದಲ್ಲಿದ್ದ ಈರುಳ್ಳಿ ಬೆಳೆ ಕೊಳೆದು ಜಿಲ್ಲೆಯ ರೈತರು ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಿದ್ದರು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಆಗಮಿಸಿ ನಷ್ಟದ ಪ್ರಮಾಣ ಅಂದಾಜಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಆದರೆ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಕೆಲವರಿಗೆ ಪರಿಹಾರ ಬಂದಿದ್ದರೆ ಮತ್ತೆ ಕೆಲವರಿಗೆ ಬಂದಿಲ್ಲ. ಅಧಿಕಾರಿಗಳು ಇಂದಲ್ಲಾ ನಾಳೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಪರಿಹಾರದ ಬಗ್ಗೆ ಜಿಲ್ಲಾಡಳಿತ ಗ್ಯಾರಂಟಿ ನೀಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಎಂಬುದು ಜೂಜಾಗಿದೆ. ಅತಿ ವೃಷ್ಟಿ ಇಲ್ಲವೇ ಅನಾವೃಷ್ಟಿಗೆ ಸಿಲುಕಿ ರೈತ ಹೈರಾಣಾಗಿದ್ದಾನೆ. ಇದರ ನಡುವೆ ಕಳಪೆ ಬಿತ್ತನೆ ಬೀಜದ ಫಲವನ್ನು ಉಣ್ಣುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗದ ಸರ್ಕಾರ ಬೆಳೆ ಹಾನಿಗೆ ಪರಿಹಾರ ಒದಗಿಸಬೇಕೆಂದರು.

ಕೃಷಿ ಪಂಪುಸೆಟ್ಟುಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯ ಸರ್ಕಾರ 2023ರಲ್ಲಿ ರದ್ದು ಮಾಡಿದೆ. ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ರೈತರು ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಪಡಯಬೇಕಾದರೆ 3 ರಿಂದ ನಾಲ್ಕು ಲಕ್ಷ ರು. ವ್ಯಯ ಮಾಡಬೇಕಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಅಕ್ರಮ-ಸಕ್ರಮವನ್ನು ಮರು ಸ್ಥಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.ರೈತ ಸಂಘದ ರಾಜ್ಯ ಮುಖಂಡ ಕೆ.ಪಿ. ಭೂತಯ್ಯ, ಜಿಲ್ಲಾ ಉಪಾಧ್ಯಕ್ಷರುಗಳಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಇಸ್ಸಾಮುದ್ರ ಪ್ರಭು, ಹಿರಿಯೂರು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಯುವ ಅಧ್ಯಕ್ಷ ಚೇತನ ಯಳನಾಡು, ತಿಪ್ಪೇಸ್ವಾಮಿ ಕೆರೆನಹಳ್ಳಿ, ಗೌಸ್ ಪೀರ್, ಸುರೇಶ್, ಶಿವರಾಜು, ಅಪ್ಪು, ಅಮರೇಶ್, ಅಜ್ಜಣ್ಣ, ಲಕ್ಷ್ಮೀಕಾಂತ್, ರೇವಣ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.