ಅಕಾಲಿಕ ಮಳೆ ಮತ್ತು ತೀವ್ರ ಮೋಡ ಕವಿದ ವಾತಾವರಣವು ಜಿಲ್ಲೆಯ ಬೆನ್ನೆಲುಬಾದ ರೈತನ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಹಾನಿಯಾಗುವ ಭೀತಿ ಎದುರಾಗಿದೆ.
ಶಿವಕುಮಾರ ಕುಷ್ಟಗಿ
ಗದಗ: ಮುಂಗಾರು ಹಂಗಾಮಿನಲ್ಲಿ ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದರು. ಇದು ಸಾಲದೆಂಬಂತೆ ಭಾನುವಾರ ಬೆಳಗ್ಗೆಯಿಂದ ಜಿಲ್ಲಾದ್ಯಂತ ನಿರ್ಮಾಣವಾಗಿರುವ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ರೈತರನ್ನು ಆತಂಕಕ್ಕೆ ದೂಡಿದೆ.ಅಕಾಲಿಕ ಮಳೆ ಮತ್ತು ತೀವ್ರ ಮೋಡ ಕವಿದ ವಾತಾವರಣವು ಜಿಲ್ಲೆಯ ಬೆನ್ನೆಲುಬಾದ ರೈತನ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಹಾನಿಯಾಗುವ ಭೀತಿ ಎದುರಾಗಿದೆ.
ಹಿಂಗಾರಿನ ಮೇಲೆ ಆಸೆ: ಈ ವರ್ಷದ ಆರಂಭದಲ್ಲೇ ಜಿಲ್ಲೆಯ ರೈತರಿಗೆ ಪ್ರಕೃತಿ ಮುನಿಸಿಕೊಂಡಿತ್ತು. ಮುಂಗಾರು ಹಂಗಾಮಿನಲ್ಲಿ ಸುರಿದ ಅಪಾರ ಮಳೆಯಿಂದಾಗಿ ಅತಿವೃಷ್ಟಿಯಾಗಿ ಹೆಸರು ಬೆಳೆ ಸಂಪೂರ್ಣವಾಗಿ ಮಣ್ಣು ಪಾಲಾಗಿತ್ತು. ಅಂದು ಅನುಭವಿಸಿದ ನಷ್ಟವನ್ನು ಹಿಂಗಾರು ಹಂಗಾಮಿನ ಕಡಲೆ ಬೆಳೆಯ ಮೂಲಕ ಸರಿದೂಗಿಸಿಕೊಳ್ಳಬಹುದು ಎಂಬ ಆಸೆಯಲ್ಲಿದ್ದ ರೈತರಿಗೆ ಈಗ ಮತ್ತೆ ಮಳೆರಾಯ ತಣ್ಣೀರು ಸುರಿಸಿದ್ದಾನೆ.1.32 ಲಕ್ಷ ಹೆಕ್ಟೇರ್ ಬಿತ್ತನೆ: ಜಿಲ್ಲೆಯಲ್ಲಿ ಕಡಲೆ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ 1.32 ಲಕ್ಷ ಹೆಕ್ಟೇರ್ ಅಧಿಕ ಪ್ರದೇಶದಲ್ಲಿ ಬಿತ್ತನೆಯಾಗಿದೆ. ವಿಶೇಷವಾಗಿ ರೋಣ ಮತ್ತು ನರಗುಂದ ತಾಲೂಕುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಡಲೆ ಬೆಳೆಯಲಾಗಿದೆ. ಈ ಭಾಗದಲ್ಲಿ ನೀರಾವರಿ ಸೌಲಭ್ಯವಿರುವುದು ಮತ್ತು ಎರಡು ಬೆಳೆಗಳನ್ನು ಬೆಳೆಯುವ ರೈತರ ಹಂಬಲದಿಂದಾಗಿ ಬಿತ್ತನೆ ಕಾರ್ಯ ಕೊಂಚ ವಿಳಂಬವಾಗಿತ್ತು.
ಪ್ರಸ್ತುತ ರೋಣ ಮತ್ತು ನರಗುಂದ ಭಾಗದ ಕಡಲೆ ಬೆಳೆಯು ಹಸಿರಾಗಿದ್ದು, ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿದೆ. ಆದರೆ, ಸತತವಾಗಿ ಮೋಡ ಕವಿದ ವಾತಾವರಣ ಹಾಗೂ ಭಾನುವಾರ ಬೆಳಗ್ಗೆ ಬಿದ್ದ ತುಂತುರು ಮಳೆಯಿಂದಾಗಿ ಗಿಡಗಳಲ್ಲಿನ ಹುಳಿ ತೊಳೆದು ಕಾಯಿ ಕಟ್ಟುವ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಇದರಿಂದ ಇಳುವರಿಯಲ್ಲಿ ಭಾರಿ ಕುಸಿತ ಉಂಟಾಗುವ ಆತಂಕ ರೈತರನ್ನು ಕಾಡುತ್ತಿದೆ.ಕಟಾವಿಗೆ ಬಂದ ಬೆಳೆ: ಇತ್ತ ಜಿಲ್ಲೆಯ ಇತರ ತಾಲೂಕುಗಳಾದ ಗದಗ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಭಾಗಗಳಲ್ಲಿ ಮುಂಗಡವಾಗಿ ಬಿತ್ತನೆಯಾಗಿದ್ದ ಕಡಲೆ ಬೆಳೆ ಈಗಾಗಲೇ ಒಣಗುವ ಹಂತಕ್ಕೆ ತಲುಪಿದೆ. ಹಲವು ಕಡೆ ರೈತರು ಕೊಯ್ಲಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಮಳೆ ಸುರಿಯುತ್ತಿರುವುದರಿಂದ ಒಣಗಿದ ಕಡಲೆ ಕಾಳು ಕಪ್ಪಾಗುವ ಸಾಧ್ಯತೆ ಹೆಚ್ಚಿದೆ. ಇದು ಮಾರುಕಟ್ಟೆಯಲ್ಲಿ ಬೆಲೆಯ ಕುಸಿತಕ್ಕೆ ಕಾರಣವಾಗಲಿದ್ದು, ರೈತರಿಗೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಲಿದೆ.
ಮೋಡ ಕವಿದ ವಾತಾವರಣ ಹಾಗೂ ತುಂತುರು ಕೇವಲ ಕಡಲೆ ಬೆಳೆಗೆ ಅತಿ ಹೆಚ್ಚಿನ ಹಾನಿಯುಂಟು ಮಾಡಲಿದೆ. ಇದರೊಟ್ಟಿಗೆ ಕಟಾವು ಮಾಡಿ ಉತ್ತಮ ಧಾರಣೆ ಇಲ್ಲದೇ ಕಾಯುತ್ತಿರುವ ಗೋವಿನಜೋಳ ಬೆಳೆದ ರೈತರು, ಈಗಾಗಲೇ ಕಟಾವು ಮಾಡಿ ಒಣಗಲು ಹಾಕಿರುವ ಕೆಂಪು ಮೆಣಸಿನಕಾಯಿ, ಗೋದಿ, ಬಿಳಿಜೋಳ ಬೆಳೆಗೂ ಈ ವ್ಯತಿರಿಕ್ತ ಹವಾಮಾನ ಸಮಸ್ಯೆ ಸೃಷ್ಟಿಸುತ್ತಿದೆ.ಮೋಡ ಕವಿದ ವಾತಾವರಣ: ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಹೆಸರು ಬೆಳೆ ಕೈಕೊಟ್ಟಿತು. ಕಡಲೆಯಾದರೂ ಕೈಹಿಡಿಯಬಹುದು ಎಂದು ಸಾಲ ಮಾಡಿ ಬಿತ್ತನೆ ಮಾಡಿದ್ದೆವು. ಈಗ ನೋಡಿದರೆ ಕಾಯಿ ಕಟ್ಟುವ ಸಮಯಕ್ಕೆ ಮಳೆ ಬರುತ್ತಿದೆ. ಮೋಡ ಕವಿದ ವಾತಾವರಣದಿಂದಾಗಿ ಕೀಟಗಳ ಬಾಧೆಯೂ ಹೆಚ್ಚುತ್ತಿದೆ. ಪ್ರಕೃತಿಯ ಈ ಲೀಲೆಗೆ ಧೃತಿಗೆಟ್ಟಿದ್ದೇವೆ ಎಂದು ಸವಡಿ ಗ್ರಾಮದ ರೈತ ರಾಮನಗೌಡ ಅರಹುಣಸಿ ತಿಳಿಸಿದರು.
ಪರಿಹಾರ ಘೋಷಿಸಬೇಕು: ಜಿಲ್ಲೆಯ ರೈತ ಸಮುದಾಯವು ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯು ಕೂಡಲೇ ಈ ಬಗ್ಗೆ ಗಮನಹರಿಸಿ, ಹಾನಿಯ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.