ಅಸ್ಪೃಶ್ಯತೆ ಅಟ್ಟಹಾಸ, ಅಲ್ಲಲ್ಲಿ ತಲೆತಗ್ಗಿಸುವ ಘಟನೆಗಳು

| Published : Dec 31 2024, 01:01 AM IST

ಅಸ್ಪೃಶ್ಯತೆ ಅಟ್ಟಹಾಸ, ಅಲ್ಲಲ್ಲಿ ತಲೆತಗ್ಗಿಸುವ ಘಟನೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಸ್ಪೃಶ್ಯತೆ ಅಟ್ಟಹಾಸ, ಅಲ್ಲಲ್ಲಿ ತಲೆತಗ್ಗಿಸುವ ಘಟನೆಗಳು

೨೦೨೪ ವಿದಾಯ ಭಾಗ -೫

ಅದ್ಧೂರಿಯಾಗಿ ನಡೆದ ಕನಕಗಿರಿ ಉತ್ಸವ । ಕೃಷಿ ಸಮುದಾಯ ತಲ್ಲಣ ಮಾಡಿದ ನೆರೆಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ ಅಸ್ಪೃಶ್ಯತೆ ಅಟ್ಟಹಾಸ ಮೆರೆಯುತ್ತಲೇ ಇದೆ. ಆಗಾಗ ಅಲ್ಲಲ್ಲಿ ನಡೆಯುತ್ತಿದ್ದ ಪ್ರಕರಣಗಳು 2024ರಲ್ಲಿ ಮಿತಿಮೀರಿ ನಡೆದವು. ಇದು ಜಿಲ್ಲಾಡಳಿತ ಮತ್ತು ಸರ್ಕಾರ ತಲೆತಗ್ಗಿಸುವಂತೆ ಆಯಿತು. ಕೊನೆಗೆ ಇದರ ವಿರುದ್ಧ ದೊಡ್ಡ ಅಭಿಯಾನವನ್ನೇ ಜಿಲ್ಲಾಡಳಿತ ಹಮ್ಮಿಕೊಂಡಿದೆ.

ಇನ್ನು ಅಚ್ಚರಿ ಎಂದರೆ 2024ರಲ್ಲಿಯೇ ಅಸ್ಪೃಶ್ಯತೆ ಪ್ರಕರಣವೊಂದರಲ್ಲಿ 101 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ, ಆದೇಶ ಮಾಡಿದ್ದು ದೇಶವ್ಯಾಪಿ ಚರ್ಚೆಯಾಯಿತು.

ಸುಮಾರು 10-15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇದೇ ವರ್ಷದಲ್ಲಿ ಶಿಕ್ಷೆ ಪ್ರಕಟವಾಯಿತು. ನಂತರ ಧಾರವಾಡ ಹೈಕೋರ್ಟಿನಲ್ಲಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನೀಡಿದ್ದ ತೀರ್ಪಿಗೆ ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಹೀಗೆ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಅಸ್ಪೃಶ್ಯತೆ ಪ್ರಕರಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಈ ವರ್ಷದಲ್ಲಿಯೇ ಅತೀ ಹೆಚ್ಚು ಪ್ರಕರಣಗಳು ಆಗಿರುವುದು ಮತ್ತು ದೊಡ್ಡ ಶಿಕ್ಷೆ ಪ್ರಕಟವಾಗಿರುವುದು.

ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರಿಕ ದಲಿತನೋರ್ವನನ್ನು ಕತ್ತರಿಯಿಂದ ಇರಿದು ಕೊಂದ ಘಟನೆಯಂತೂ ಇಡೀ ರಾಜ್ಯವೇ ತಲ್ಲಣವಾಗುವಂತೆ ಮಾಡಿತು. ಈ ಪ್ರಕರಣದಲ್ಲಿಯೂ ಆರೋಪಿಯನ್ನು ಬಂಧಿಸಲಾಯಿತು.

ಇದಾದ ಮೇಲೆ ಹಿರೇಬಗನಾಳ, ಹೂವಿನಾಳ ಗ್ರಾಮದಲ್ಲಿ ಸೇರಿದಂತೆ ಹಲವು ಕಡೆ ಇಂಥ ಅಸ್ಪೃಶ್ಯತೆ ಪ್ರಕರಣಗಳು ನಡೆದಿದ್ದು ಮಾತ್ರ ಜಿಲ್ಲೆಯ ಪಾಲಿಗೆ ಮಸಿ ಬಳಿದಂತೆ ಆಯಿತು.

ಶಸ್ತ್ರಚಿಕಿತ್ಸೆಗೆ ಮೂರು ತಿಂಗಳು:

ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದರೆ ಮೂರು ತಿಂಗಳು ಕಾಯಬೇಕು ಎನ್ನುವ ಕುರಿತು ಕನ್ನಡಪ್ರಭ ಸರಣಿ ವರದಿಯನ್ನೇ ಪ್ರಕಟ ಮಾಡಿತು.

ದಾಖಲೆ ಸಮೇತ ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಐಸಿಯು ಬೆಡ್ ಸಂಖ್ಯೆಯನ್ನು ಹೆಚ್ಚಳ ಮಾಡಿತು. ಅಷ್ಟೇ ಅಲ್ಲ, ರಾಜ್ಯ ಸರ್ಕಾರವೂ ಈ ಕುರಿತು ವರದಿಯನ್ನು ಕೇಳಿದ್ದರಿಂದ ತಿಂಗಳ ಕಾಲ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಲಾಯಿತು. ಅಷ್ಟೇ ಅಲ್ಲ, ಅಷ್ಟು ದಿನ ತಿಂಗಳ ಕಾಲ ಸರ್ಜರಿಗಾಗಿ ಕಾಯುತ್ತಿದ್ದ ಪ್ರಕರಣಗಳನ್ನು ತಕ್ಷಣ ಸರ್ಜರಿ ಮಾಡಿಸಲಾಯಿತು.

ಕನಕಗಿರಿ ಉತ್ಸವ:

2024ರಲ್ಲಿಯೇ ಕನಕಗಿರಿ ಉತ್ಸವ ನಡೆಯಿತು. ಅದ್ಧೂರಿಯಾಗಿ ನಡೆದ ಕನಕಗಿರಿ ಉತ್ಸವದ ವೇಳೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರ ಮೂಲಕ ಅತ್ಯುತ್ತಮ ಕಾರ್ಯಕ್ರಮವನ್ನು ನೀಡಲಾಯಿತು.

ನೆರೆಯ ಬರೆ:

2024ರಲ್ಲಿ ಭಾರಿ ಮಳೆಯಾಗಿದ್ದು ಅಲ್ಲದೆ ವರ್ಷದ ಬಹುತೇಕ ಸಮಯ ಬಂದಿದ್ದ ನೆರೆ ಕೃಷಿ ಸಮುದಾಯವನ್ನು ತಲ್ಲಣ ಮಾಡುವಂತೆ ಮಾಡಿತು.

ಅದರಲ್ಲೂ ಹಿರೇಹಳ್ಳ ಜಲಾಶಯ ಭರ್ತಿಯಾಗಿದ್ದರಿಂದ ಏಕಾಏಕಿ ನೀರು ಬಿಟ್ಟಿದ್ದರಿಂದ ಹಳ್ಳದುದ್ದಕ್ಕೂ ಎರಡು ಬದಿಯಲ್ಲಿ ಪ್ರವಾಹದ ನೀರು ಹೊಲಗಳಿಗೆ ನುಗ್ಗಿ ಕೋಟ್ಯಂತರ ರುಪಾಯಿ ಬೆಳೆ ಹಾನಿ ಮಾಡಿತು. ಅಷ್ಟೇ ಅಲ್ಲ, ಭೂಮಿಯನ್ನೇ ಕೊಚ್ಚಿಕೊಂಡು ಹೋಗುವಂತೆ ಮಾಡಿದ್ದು ರೈತರ ಕಣ್ಣಲ್ಲಿ ನೀರು ಬರುವಂತಾಯಿತು.

2024ನೇ ವರ್ಷದಲ್ಲಿ ಮಳೆ ಅತ್ಯುತ್ತಮವಾಗಿ ಆಗಿದೆ ಎನ್ನುವುದಕ್ಕಿಂತ ಮಿತಿಮೀರಿ ಮಳೆಯಾಗಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿಯೂ ಎಡೆಬಿಡದೆ ಸುರಿದ ಮಳೆಯಿಂದ ಕೈ ಬಂದ ಬೆಳೆ ಬಾಯಿಗೆ ಬರದಂತಾಗಿ ಕೊಳೆಯುವಂತೆ ಆಯಿತು.

ಸಂವಿಧಾನ ಓದು:

ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಮೂಡಿಸಲು ಮಾನವ ಸರಪಳಿ ನಿರ್ಮಾಣ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯುದ್ದಕ್ಕೂ ಮಾನವ ಸರಪಳಿ ನಿರ್ಮಾಣ ಮಾಡಲಾಯಿತು.