ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವ, ಅಧಿಕಾರಿಗಳೇ ಹೊಣೆ

| Published : Oct 21 2024, 12:37 AM IST

ಸಾರಾಂಶ

ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಹಾಗೂ ಅಧಿಕಾರಿಗಳೇ ಅದಕ್ಕೆ ಹೊಣೆ ಎಂದು ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ರತ್ನಾಕರ ತಳವಾರ ಆರೋಪಿಸಿದ್ದಾರೆ.

ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ರತ್ನಾಕರ ತಳವಾರ ಆರೋಪ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಅದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಹಾಗೂ ಅಧಿಕಾರಿಗಳೇ ಅದಕ್ಕೆ ಹೊಣೆ ಎಂದು ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ರತ್ನಾಕರ ತಳವಾರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ವಾರಕ್ಕೆರಡರಂತೆ ಅಸ್ಪೃಶ್ಯತೆ, ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ನಿಯಂತ್ರಿಸಬೇಕಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರ ಇದೇ ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದರು.

ಜಿಲ್ಲೆಯ ಕಾರಟಗಿ ತಾಲೂಕಿನ ಜಮಾಪುರದಲ್ಲಿ ದಲಿತರ ಸಂಖ್ಯೆ ಕಡಿಮೆ. ಆದರೆ ಇಲ್ಲಿಯ ಸವರ್ಣೀಯರು ಸಂಖ್ಯಾಬಲದ ಆಧಾರದಲ್ಲಿ ಗ್ರಾಮಸಭೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಒಪ್ಪಿಕೊಂಡು, ಶೌಚಾಲಯ ನಿರ್ಮಿಸಲು ಹೊರಟಿದ್ದಾರೆ. ಈ ವೇಳೆ ದಲಿತ ಕುಟುಂಬಗಳ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದವರು ಕಾರಟಗಿ, ಗಂಗಾವತಿ ಹಾಗೂ ಕೊಪ್ಪಳ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಸವರ್ಣೀಯರು ಸಹ ದಲಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.

ಇದೇ ರೀತಿ ಕನಕಗಿರಿ ಕೆ. ಕಾಟಾಪುರದಲ್ಲಿಯೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇತ್ತೀಚಿಗೆ ಸಂಗನಾಳ ಘಟನೆಯ ನಂತರ ಜಾಗೃತಿ ಸಮಾವೇಶ ಮಾಡಿ, ಅಧಿಕಾರಿಗಳನ್ನು ಹೊಣೆ ಮಾಡಬೇಕು ಎಂದು ಆಗ್ರಹಿಸಿತು. ಕೊಪ್ಪಳ ಜಿಲ್ಲೆಯಿಂದಲೇ ವಿನಯ ಸಾಮರಸ್ಯ ಯೋಜನೆ ಘೋಷಣೆಯಾಗಿದೆ. ಆದರೆ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದರು.

ಹಿರಿಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ಇಲ್ಲಿ ಪ್ರಗತಿಪರರನ್ನು, ಸಾಹಿತಿಗಳನ್ನು ಕರೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಕೇವಲ ಇಂಥ ಘಟನೆ ನಡೆದಾಗ ಶಾಂತಿ ಸಭೆ ಮಾಡಿ, ತಮ್ಮ ಕೆಲಸ ಮುಗಿತು ಎಂದು ಸುಮ್ಮನೆ ಕುಳಿತರೆ ನಡೆಯುವುದಿಲ್ಲ. ಸಮಾಜದಲ್ಲಿಯ ಅಸ್ಪೃಶ್ಯತೆ ನಿಲ್ಲಬೇಕು. ಸಮ ಸಮಾಜ ನಿರ್ಮಾಣವಾಗಬೇಕು ಎಂದು ಹೇಳಿದರು.

ಹೋರಾಟಗಾರ ಮಹಾಂತೇಶ ಕೊತಬಾಳ ಮಾತನಾಡಿ, ಜಿಲ್ಲೆಯ ಪೊಲೀಸರು ಜನಸ್ನೇಹಿಗಳಾಗಿಲ್ಲ. ಅವರು ರಾಜಕಾರಣಿಗಳ ಹೇಳಿದಂತೆ ಕೇಳುವ ಅಧಿಕಾರಿಗಳಾಗಿದ್ದಾರೆ. ಇಲ್ಲಿಯ ಮಠ-ಮಾನ್ಯಗಳು ಕೇವಲ ಆಸ್ತಿ ಬೆಳೆಸಲು, ಹಾಸ್ಟೆಲ್ ನಿರ್ಮಾಣಕ್ಕೆ ಸೀಮಿತವಾಗದೆ ಸಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಷ್ಮಣ ಪಿರಗಾರ, ಡಿ.ಎಂ. ಬಡಿಗೇರ ಇದ್ದರು.