ಉಪಯೋಗಕ್ಕೆ ಬಾರದ ಪುರಸಭೆ ವಸತಿ ಗೃಹಗಳು

| Published : Nov 18 2025, 01:30 AM IST

ಸಾರಾಂಶ

ವಸತಿ ಗೃಹಗಳು ಇತ್ತ ಬಳಕೆಗೂ ಬಾರದೆ ಮತ್ತೊಂದು ಕಡೆ ಕೆಡವಿ ಮಳಿಗೆಗಳನ್ನೂ ನಿರ್ಮಾಣ ಮಾಡದೆ ಬಿಟ್ಟಿರುವುದರಿಂದ ವಸತಿ ಗೃಹಗಳು ಇಂದೋ ನಾಳೆನೋ ನೆಲ ಕಚ್ಚುವ ಹಂತದಲ್ಲಿದೆ. ಮನೆ ಮೇಲೆ ಕಾಂಗ್ರೆಸ್ ಗಿಡಗಳು ದಟ್ಟವಾಗಿ ಬೆಳೆದಿದೆ. ಮನೆಗಳ ಸುತ್ತಲೂ ನೈರ್ಮಲ್ಯವಿಲ್ಲದೆ ಗಬ್ಬು ನಾರುತ್ತಿದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪುರಸಭೆ ವಸತಿ ಗೃಹಗಳು ಹಲವು ವರ್ಷಗಳಿಂದ ಬಳಕೆಗೆ ಬಾರದೆ ಪಾಳು ಬಿದ್ದಿದ್ದು, ಪುರಸಭೆ ಆಡಳಿತ ಮಂಡಳಿ ಪಾಳು ಬಿದ್ದಿರುವ ವಸತಿ ಗೃಹಗಳನ್ನು ನೆಲಸಮ ಮಾಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿದರೆ ಆದಾಯವಾದರೂ ಪುರಸಭೆಗೆ ಬರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಪಂಚಾಯ್ತಿ ಕಚೇರಿ ಹಿಂಭಾಗದಲ್ಲಿ ಹಲವು ದಶಕಗಳ ಹಿಂದೆ ಪುರಸಭೆಯಲ್ಲಿ ಕೆಲಸ ಮಾಡುವ ನೌಕರರಿಗೆ ಈ ವಸತಿ ಗೃಹಗಳನ್ನು ಮೀಸಲಿಡಲಾಗಿತ್ತು. ನಂತರ ನೌಕರರಲ್ಲದವರೂ ಪ್ರಭಾವದಿಂದ ಮನೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಗೆ ಪಡೆದು ವಾಸ ಮಾಡುತ್ತಿದ್ದರು.

ಅನಧಿಕೃತ ವಾಸ:

ಕಾಲ ಕಳೆದಂತೆ ವಸತಿ ಗೃಹಗಳು ಶಿಥಿಲವಾಗಿ ಮೇಲ್ಚಾವಣಿ ಸಿಮೆಂಟ್ ಉದುರ ತೊಡಗಿತು. ಮೊದಲೇ ಕಿರಿದಾಗಿದ್ದ ಗೃಹಗಳಲ್ಲಿ ವಾಸ ಮಾಡಲು ನೌಕರರು ಹಿಂದೇಟು ಹಾಕಿದ್ದರಿಂದ ಪುರಸಭೆಗೆ ಸಂಬಂಧ ಇಲ್ಲದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು.ಶಿಥಿಲವಾಗಿದ್ದ ವಸತಿ ಗೃಹಗಳನ್ನು ಕೆಡವಿ ವಾಣಿಜ್ಯ ಸಂಕಿರಗಳನ್ನು ನಿರ್ಮಾಣ ಮಾಡಲೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ೮ ವರ್ಷಗಳ ಹಿಂದೆ ಒಂದು ಕಡೆ ಮಾತ್ರ ಕಡೆವಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಹರಾಜು ಮೂಲಕ ಬಾಡಿಗೆಗೆ ನೀಡಿದ್ದಾರೆ. ಪುರಸಭೆ ನಿರೀಕ್ಷೆ ಮಾಡಿದಷ್ಟು ವಾಣಿಜ್ಯ ಮಳಿಗೆಗೆಳು ಉಪಯೋಗಕ್ಕೆ ಬಾರದ ಕಾರಣ, ಮತ್ತೊಂದು ಕಡೆ ಇರುವ ವಸತಿ ಗೃಹಗಳನ್ನು ಕಡೆವಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಆಸಕ್ತಿ ತೋರಲಿಲ್ಲ.ಪಾಳುಬಿದ್ದ ವಸತಿ ಗೃಹಗಳು

ಇದರಿಂದ ವಸತಿ ಗೃಹಗಳು ಇತ್ತ ಬಳಕೆಗೂ ಬಾರದೆ ಮತ್ತೊಂದು ಕಡೆ ಕೆಡವಿ ಮಳಿಗೆಗಳನ್ನೂ ನಿರ್ಮಾಣ ಮಾಡದೆ ಬಿಟ್ಟಿರುವುದರಿಂದ ವಸತಿ ಗೃಹಗಳು ಇಂದೋ ನಾಳೆನೋ ನೆಲ ಕಚ್ಚುವ ಹಂತದಲ್ಲಿದೆ. ಮನೆ ಮೇಲೆ ಕಾಂಗ್ರೆಸ್ ಗಿಡಗಳು ದಟ್ಟವಾಗಿ ಬೆಳೆದಿದೆ. ಮನೆಗಳ ಸುತ್ತಲೂ ನೈರ್ಮಲ್ಯವಿಲ್ಲದೆ ಗಬ್ಬು ನಾರುತ್ತಿದೆ.

ಈ ಪ್ರದೇಶದ ಸುತ್ತಮುತ್ತಲೂ ಸಾರ್ವಜನಿಕ ಶೌಚಾಲಯಗಳಿಲ್ಲದ ಕಾರಣ ತಾಲೂಕು ಪಂಚಾಯ್ತಿಗೆ ಬರುವ ಜನರಿಗೆ ಹಾಗೂ ಭೂ ಬ್ಯಾಂಕ್‌ಗೆ ಬರುವ ಜನರಿಗೆ ದೇಹದ ಬಾಧೆ ತೀರಿಸಿಕೊಳ್ಳಲು ಸ್ಥಳವಿಲ್ಲದೆ ಶಿಥಿಲಗೊಂಡಿರುವ ಪುರಸಭೆ ವಸತಿ ಗೃಹಗಳನ್ನೇ ಶೌಚಾಲಯಗಳನ್ನಾಗಿ ಮಾಡರ್ಪಡಿಸಿಕೊಂಡಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿ ನಿವಾಸಿಗಳಿಗೆ ದುರ್ನಾತ ಶಾಪವಾಗಿ ಪರಿಣಮಿಸಿದೆ.

ರಾತ್ರಿ ವೇಳೆ ಕುಡುಕರ ಅಡ್ಡ

ಈ ವಸತಿಗೃಹಗಳು ರಾತ್ರಿ ವೇಳೆ ಸಹ ಕುಡುಕರ ಅಡ್ಡವಾಗಿ ಬದಲಾಗಿದೆ ಎಂಬುದು ಸಾರ್ವಜನಿಕರ ದೂರಾಗಿದೆ. ಆದ್ದರಿಂದ ಪುರಸಭೆ ಬಳಕೆಗೆ ಬಾರದಿರುವ ಈ ವಸತಿ ಗೃಹಗಳನ್ನು ನೆಲಸಮ ಮಾಡಲಿ ಇಲ್ಲವೆ ವಾಣಿಜ್ಯ ಮಳಿಗೆಗಳ್ನಾದರೂ ನಿರ್ಮಾಣ ಮಾಡಿ ದಿನ ನಿತ್ಯ ಉಂಟಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸಲಿ ಎಂದು ವಸತಿ ಪ್ರದೇಶದ ನಿವಾಸಿಗರು ಒತ್ತಾಯಿಸಿದ್ದಾರೆ.