ಬಳಕೆಯಾಗದ ರಾಜ್ಯ ಸರ್ಕಾರದ ಅನುದಾನ: ಮೇಯರ್ ಕಚೇರಿ ಮುತ್ತಿಗೆ

| Published : Sep 10 2025, 01:03 AM IST

ಸಾರಾಂಶ

ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರು ಧಾರವಾಡ 9 ವಾರ್ಡ್‌ಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ₹10 ಕೋಟಿ ಎಸ್‌ಎಫ್‌ಸಿ ಅನುದಾನ ಮಂಜೂರು ಮಾಡಿಸಿದ್ದು, ಈ ಅನುದಾನ ಬಿಡುಗಡೆಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಅನುಮೋದನೆ ನೀಡಬೇಕು. ಆದರೆ, ಮೂರು ತಿಂಗಳಿಂದ ಅನುಮೋದನೆ ನೀಡಲು ಬಿಜೆಪಿ ಸದಸ್ಯರು ಅಡ್ಡಿ ಮಾಡುತ್ತಿದ್ದಾರೆ.

ಧಾರವಾಡ: ರಾಜ್ಯ ಸರ್ಕಾರ ನೀಡಿದ ಅನುದಾನ ಬಳಸಿಕೊಳ್ಳದೇ ಬಿಜೆಪಿ ಸದಸ್ಯರು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಸೇರಿದಂತೆ ಧಾರವಾಡ ಗ್ರಾಮೀಣ ಕಾಂಗ್ರೆಸ್ ಮುಖಂಡರು ಮಂಗಳವಾರ ಇಲ್ಲಿಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಧಾರವಾಡ ಶಾಸಕ ವಿನಯ ಕುಲಕರ್ಣಿ ಅವರು ಧಾರವಾಡ 9 ವಾರ್ಡ್‌ಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದಿಂದ ₹10 ಕೋಟಿ ಎಸ್‌ಎಫ್‌ಸಿ ಅನುದಾನ ಮಂಜೂರು ಮಾಡಿಸಿದ್ದು, ಈ ಅನುದಾನ ಬಿಡುಗಡೆಗೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಅನುಮೋದನೆ ನೀಡಬೇಕು. ಆದರೆ, ಮೂರು ತಿಂಗಳಿಂದ ಅನುಮೋದನೆ ನೀಡಲು ಬಿಜೆಪಿ ಸದಸ್ಯರು ಅಡ್ಡಿ ಮಾಡುತ್ತಿದ್ದಾರೆ. ಅಭಿವೃದ್ಧಿ ಸಹಿಸದ ಬಿಜೆಪಿ ಮಹಾಪೌರರು ಹಾಗೂ ಸಭಾನಾಯಕರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದು ಇದು ಧಾರವಾಡ ಜನತೆಗೆ ಮಾಡಿದ ಅನ್ಯಾಯ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಏಗನಗೌಡರ ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕ ಇಮ್ರಾನ ಯಲಿಗಾರ ಮಾತನಾಡಿ, ಪಾಲಿಕೆಯಲ್ಲಿ ಅನುದಾನದ ಕೊರತೆ ಇದ್ದು, ನಮ್ಮ ನಾಯಕರು ವಿಶೇಷ ಅನುದಾನ ತಂದರೂ ಅನುಮೋದನೆ ನೀಡದೇ ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ನೀಡಿದ ಅನುದಾನ ಬಳಕೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ, ರಾಜಶೇಖರ ಕಮತಿ, ತುಳಸಾ ಪೂಜಾರ, ಶಂಭು ಸಾಲಮನಿ, ದೀಪಾ ನೀರಲಕಟ್ಟಿ, ಕವಿತಾ ಕಬ್ಬೇರ, ಮುಖಂಡರಾದ ಬಸವರಾಜ ಜಾಧವ, ಆನಂದ ಸಿಂಗನಾಥ, ಶಿವಾನಂದ ಗಿರಿಯಪ್ಪನವರ, ಸಿದ್ದಪ್ಪ ಸಪೂರಿ, ಸಂತೋಷ ನೀರಲಕಟ್ಟಿ, ಜಾಫರ ಕಳ್ಳಿಮನಿ, ಮಿಲಿಂದ ಇಚ್ಛಂಗಿ ಇದ್ದರು.