ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸುಕ್ಷೇತ್ರ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಅಭಯ ಶ್ರೀರಾಮ ಏಕಶಿಲಾ ಮೂರ್ತಿಯ ಅನಾವರಣ ಮಾಡಲಾಯಿತು.
ಮಂತ್ರಾಲಯದ ರಾಯಚೂರು ಮುಖ್ಯರಸ್ತೆಯಲ್ಲಿರುವ ಅಭಯ ಆಂಜನೇಯ ಸ್ವಾಮಿ ಮಂದಿರದ ಮುಂಭಾಗದಲ್ಲಿರುವ ಆರು ಎಕರೆ ಪ್ರದೇಶದಲ್ಲಿ ಅಭಯ ಶ್ರೀರಾಮನ ಮೂರ್ತಿ, ಮಂದಿರ ಹಾಗೂ ಗಾರ್ಡ್ ನಿರ್ಮಾಣವನ್ನು ಮಾಡಲಾಗುತ್ತಿದೆ. ಇದೀಗ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿರುವ ಶ್ರೀರಾಮಮಂದಿರ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು 36 ಅಡಿ ಎತ್ತರದ ಅಭಯ ಶ್ರೀರಾಮನ ಏಕಶಿಲಾ ಮೂರ್ತಿಯನ್ನು ಶ್ರೀಮಠವು ಗುರುತಿಸಿದ ಸ್ಥಳದಲ್ಲಿಯೇ ಪೂಜಾ-ವಿಧಿವಿಧಾನಗಳ ಮುಖಾಂತರ ಪ್ರತಿಷ್ಠಾಪಿಸಲಾಯಿತು.ಮಂತ್ರಾಲಯ ಶ್ರೀರಾಮಮಯಸುಕ್ಷೇತ್ರ ಮಂತ್ರಾಲಯವು ಶ್ರೀರಾಮಮಯಗೊಳ್ಳುತ್ತಿದೆ. ಗ್ರಾಮ ಪ್ರಮುಖ ಸ್ಥಳಗಳಲ್ಲಿ ಭಾರಿ ಎತ್ತರದ ಶ್ರೀರಾಮನ ಮೂರ್ತಿ ಹಾಗೂ ಲೋಹದ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಐದಾರು ವರ್ಷಗಳ ಹಿಂದೆ ಮಂತ್ರಾಲಯದಲ್ಲಿ ಸುಮಾರು 32 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ, ಆಕರ್ಷಕ ಮಂದಿರವನ್ನು ಸಹ ನಿರ್ಮಿಸಲಾಗಿದೆ. ಇದೀಗ ಇದೇ ಮಂದಿರ ಮುಂಭಾಗದಲ್ಲಿರುವ 6 ಎಕರೆ ಪ್ರದೇಶದಲ್ಲಿ 36 ಅಡಿಯ ಏಕಶಿಲೆ ಸೇರಿ ವೇದಿಕೆ ಸಮೇತ 52 ಅಡಿ ಎತ್ತದಲ್ಲಿ ಶ್ರೀ ಅಭಯರಾಮ ಮಂದಿರ ಪ್ರತಿಷ್ಠಾಪನೆ ಮಾಡಲಾಗಿದ್ದು, ಇನ್ನು ಕಟ್ಟಡ, ಗಾರ್ಡ್ ಇತರೆ ನಿರ್ಮಾಣದ ಕೆಲಸ ಭಾಕಿ ಉಳಿದಿದೆ. ಇಷ್ಟೇ ಅಲ್ಲದೇ ಸುಕ್ಷೇತ್ರ ಮಂತ್ರಾಲಯದ ಎಮ್ಮಿಗನೂರು ರಸ್ತೆಯಲ್ಲಿ ಆಂಧ್ರಪ್ರದೇಶದ ಶ್ರಿರಾಮ ಟ್ರಸ್ಟ್ ವತಿಯಿಂದ 108 ಅಡಿ ಎತ್ತರದಲ್ಲಿ ಲೋಹದ ಶ್ರೀರಾಮಮೂರ್ತಿ ನಿರ್ಮಾಣದ ಕೆಲಸವನ್ನು ಭರದಿಂದ ಸಾಗಿದೆ. ಇದರೊಂದಿಗೆ ಶ್ರೀರಾಯರ ಮಠದ ಮುಖ್ಯದ್ವಾರದಲ್ಲಿ ಸಮೀಪ 6 ಅಡಿ ಎತ್ತರ ಶ್ರೀರಾಮದೇವರ ಮೂರ್ತಿ ಪ್ರತಿಷ್ಠಾಪನೆಯನ್ನು ಸಹ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ರಾಮೋತ್ಸವವನ್ನು ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಕ್ಷೇತ್ರದಲ್ಲಿ ನಿರ್ಮಿಸಿರುವ ವೇದಿಕೆ ಸೇರಿ 52 ಅಡಿ ಎತ್ತರದ ಭವ್ಯವಾದ ವಿರಾಠ ಮೂರ್ತಿಯನ್ನು ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿದೆ. 22ರಂದು ಸುಕ್ಷೇತ್ರದಲ್ಲಿ ವಿಶೇಷ ಪೂಜೆ, ಹೋಮ, ಪ್ರಾರ್ಥನೆ, ಭಜನೆ ಹಾಗೂ ತೀರ್ಥ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.ಡಾ.ಸುಬುಧೇಂದ್ರ ತೀರ್ಥರು, ಪೀಠಾಧಿಪತಿ, ಮಂತ್ರಾಲಯ