ಬಸವ ತತ್ವ ಪಾಲನೆಯಿಂದ ಆದರ್ಶದ ಬದುಕು ಅನಾವರಣ

| Published : May 12 2024, 01:18 AM IST

ಸಾರಾಂಶ

ಭೋವಿ ಗುರುಪೀಠದಲ್ಲಿ ನಡೆದ ಬಸವ ಜಯಂತಿಯಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಅಭಿಮತ

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಬಸವ ತತ್ವ ಪಾಲನೆಯಿಂದ ಆದರ್ಶದ ಬದುಕು ಅನಾವರಣಗೊಳ್ಳುತ್ತದೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದಾರಮೇಶ್ವರ ಸ್ವಾಮೀಜಿ ಹೇಳಿದರು.ಭೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾದ ಬಸವಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಣ್ಣನವರ ಉದಾತ್ತ ಚಿಂತನೆಗಳು ನಮ್ಮ ಬುದ್ದಿ, ಮನಸ್ಸುಗಳನ್ನು ಕ್ರಿಯಾಶೀಲವಾಗಿಸುವ, ಚೈತನ್ಯ ತುಂಬುವ ಅದ್ಭುತ ಶಕ್ತಿಹೊಂದಿವೆ. ಅವರ ಸಾಹಿತ್ಯ ನಮ್ಮನ್ನು ಚಿಂತಿಸುವುದಕ್ಕೆ ಪ್ರೇರೇಪಿಸುತ್ತದೆ, ಮೌಲ್ಯಗಳನ್ನು ಪರಿಚಯಿಸುತ್ತದೆ ಎಂದರು.ಬಸವಣ್ಣನವರು ಸಮಾಜೋ-ಧಾರ್ಮಿಕ ಸುಧಾರಕರಾಗಿದ್ದು ಸರಳ ಬದುಕನ್ನು ಅಳವಡಿಸಿಕೊಂಡಿದ್ದರು. ಬಸವಣ್ಣನವರ ವಚನಗಳಲ್ಲಿ ಉಪಮಾನಗಳ ಅಪೂರ್ವತೆ ಮತ್ತು ನವೀನತೆ, ಮೃದುಹಾಸ್ಯ, ಸಮಾಜದ ನ್ಯೂನತೆ, ಅನುಭಾವಿಕತೆ, ಮೃದುಮಧುರ ಶೈಲಿ, ಜೀವನದ ಕಟು ಅನುಭವಗಳ ನೈಜನಿರೂಪಣೆ ಎಲ್ಲವೂ ಇದೆ. ಅವರ ಸಾಹಿತ್ಯ ನಮ್ಮನ್ನು ಚಿಂತಿಸುವುದಕ್ಕೆ ಪ್ರೇರೇಪಿಸುತ್ತದೆ, ಮೌಲ್ಯಗಳನ್ನು ಪರಿಚಯಿಸುತ್ತದೆ, ಆದರ್ಶಗಳನ್ನು ತೋರಿಸಿಕೊಡುತ್ತದೆ ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.

ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ ಮಾತನಾಡಿ, 12 ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರು ಹಾಗೂ ಅವರನ್ನು ಅನುಸರಿಸಿದ ಅಸಂಖ್ಯಾತ ಶಿವಶರಣರ ವಿಚಾರಧಾರೆಗಳು ನಮಗೆ ಅತ್ಯಂತ ಶ್ರೇಷ್ಠ ಮಾರ್ಗವನ್ನು ಹಾಕಿಕೊಟ್ಟಿವೆ ಎಂಬುದು ಸತ್ಯ ಸಂಗತಿ. ಬಸವ ಮಾರ್ಗ ಸರಳ ಸಹಜ ಮಾರ್ಗ. ಈ ಮಾರ್ಗದ ಪ್ರಕಾರ ಸ್ವರ್ಗ ಮತ್ತು ಭೂಲೋಕಗಳು ಬೇರೆಯಾಗಿ ಇಲ್ಲ. ಬದುಕಿನ ಶುದ್ಧಿಗಾಗಿ ಮನಸ್ಸಿನ ಶುದ್ದಿ ಅವಶ್ಯಕ. ಮನಸ್ಸುದ್ದಿಯಾದಾಗ ನಮ್ಮ ನಡೆನುಡಿಗಳು ಶುದ್ಧವಾಗುತ್ತವೆ ಎಂದರು.

ಈ ವೇಳೆ ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ನಂದ ಮಸಂದ ಸ್ವಾಮಿಗಳು, ಚಿತ್ರದುರ್ಗದ ಮೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಜಯದೇವ ಸ್ವಾಮಿಗಳು, ನಿರಂಜನಾಂದ ಸ್ವಾಮಿಗಳು,ತಿಪ್ಪೇರುದ್ರ ಸ್ವಾಮಿಗಳು, ಸತ್ಯಕ್ಕ ಜಯದೇವಿತಾಯಿ, ಪೂರ್ಣಾನಂದ ಸ್ವಾಮಿಗಳು ಇದ್ದರು.