ಕೌದಿ ನಾಟಕದ ಏಕವ್ಯಕ್ತಿ ರಂಗ ಪ್ರಯೋಗ ಅನಾವರಣ

| Published : Apr 05 2024, 01:02 AM IST

ಸಾರಾಂಶ

ಆಧುನಿಕ ಕಾಲದಲ್ಲಿ ಹತ್ತಿಬಟ್ಟೆ ಬಳಕೆ ಕಡಿಮೆಯಾಗಿದ್ದರ ಪರಿಣಾಮವಾಗಿ ಕೌದಿಯ ಪ್ರಾಮುಖ್ಯತೆಯು ಇಲ್ಲವಾಗುತ್ತಿದೆ.

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶ್ರೀರಂಗ ದತ್ತಿನಿಧಿ ವತಿಯಿಂದ ಮೈಸೂರಿನ ಕವಿತಾ ರಂಗ ತಂಡದಿಂದ ಗಣೇಶ ಅಮೀನಗಡರವರ ಹೊಸ ನಾಟಕವಾದ `ಕೌದಿ’ ಏಕವ್ಯಕ್ತಿ ರಂಗ ಪ್ರಯೋಗ ಅನಾವರಣಗೊಂಡಿತು.

ಈ ನಾಟಕವು ಬಣ್ಣ ಬಣ್ಣದ ಹಲವು ಅರಿವೆಗಳನ್ನು ಕೂಡಿಸಿ ಹೊಲಿದ ರೂಪಕವಾಗಿ ಕೌದಿ ಸಿದ್ಧಗೊಳ್ಳುವ ಬಗೆ ಮತ್ತು ಎಲ್ಲಾ ಋತುಗಳಿಗೂ ಹಳ್ಳಿಗರಿಗೆ ಮೆಚ್ಚಿನ ಹೊದಿಕೆಯಾಗಿದ್ದರ ಬಗ್ಗೆಯೂ ಬೆಳಕು ಚೆಲ್ಲಿತು. ಕೌದಿಯ ಬಗೆಗಿನ ಭಾವಕತೆಯನ್ನು ಮನಸ್ಸು ಮುಟ್ಟುವ ಹಾಗೆ ನಾಟಕ ತೆರೆಕಂಡಿತು.

ಆಧುನಿಕ ಕಾಲದಲ್ಲಿ ಹತ್ತಿಬಟ್ಟೆ ಬಳಕೆ ಕಡಿಮೆಯಾಗಿದ್ದರ ಪರಿಣಾಮವಾಗಿ ಕೌದಿಯ ಪ್ರಾಮುಖ್ಯತೆಯು ಇಲ್ಲವಾಗುತ್ತಿದೆ. ಇದರಿಂದ ಕೌದಿ ತಯಾರಿಸುವವರ ಆರ್ಥಿಕ ಸ್ಥಿತಿಗತಿ ಉತ್ತಮವಾಗಿಲ್ಲ. ಇವರ ಬದುಕಿಗೆ ಯಾವುದೇ ಹಣಕಾಸಿನ ಸಹಾಯಗಳು ದೊರಕದೆ ಕೌದಿ ತಯಾರಿಸುವವರಿಗೆ ಆರ್ಥಿಕ ಬೆಂಬಲ ಇಲ್ಲದೆ ಕಷ್ಟ ಪಡುತ್ತಿದ್ದಾರೆ. ಇದು ಅವರ ಬದುಕು ಬವಣೆಗಳ ಕುರಿತ ಬೆಳಕು ಚೆಲ್ಲುವ ಕಥಾಹಂದರವನ್ನು ಹೊಂದಿದ ನಾಟಕ ಎಂಬುದನ್ನೂ ನಿರೂಪಿಸಿತು. ಈ ನಾಟಕದಲ್ಲಿ ಭಾಗ್ಯಶ್ರೀ ಬಿ.ಪಾಳ ಅವರು ಮನೋಜ್ಞವಾಗಿ ಅಭಿನಯಿಸಿದರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ ಪರಮಶಿವಮೂರ್ತಿ ಅವರು ನಾಟಕದಲ್ಲಿ ಅಭಿನಯಸಿದ ಭಾಗ್ಯಶ್ರೀ ಬಿ.ಪಾಳ ಅವರಿಗೆ ಸನ್ಮಾನಿಸಿದರು. ಸಂಗೀತ, ವಿನ್ಯಾಸ, ನಿರ್ದೇಶನವನ್ನು ಜಗದೀಶ್ ಆರ್. ಜಾಣಿ ಮಾಡಿದರೆ, ಸಿದ್ದಾರ್ಥ ಕಟ್ಟಿಮನಿ ಮತ್ತು ಜಡೇಶ ಅವರು ರಂಗಸಜ್ಜಿಕೆಯನ್ನು ಸಜ್ಜುಗೊಳಿಸಿದ್ದರು. ಕೃಷ್ಣ ಬಡಿಗೇರ ಅವರಿಂದ ವಾದ್ಯ ಸಂಯೋಜನೆಗೊಂಡಿತ್ತು.