ಸೋಮಸಮುದ್ರದಲ್ಲಿ ವೀರ ಮದಕರಿ ನಾಯಕ ಪುತ್ಥಳಿ ಅನಾವರಣ

| Published : Sep 04 2024, 01:59 AM IST

ಸಾರಾಂಶ

ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರು ವೀರ ಮದಕರಿ ನಾಯಕ ಅವರ ಪುತ್ಥಳಿ ಅನಾವರಣ ಮಾಡಿದರು.

ಬಳ್ಳಾರಿ: ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ವೀರ ಮದಕರಿ ನಾಯಕ ಅವರ ಪುತ್ಥಳಿ ಅನಾವರಣ ಸಮಾರಂಭ ಜರುಗಿತು.

ಪುತ್ಥಳಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರು, ಮದಕರಿ ನಾಯಕನ ಜನಪರ ಆಡಳಿತ ಹಾಗೂ ಕೆಚ್ಚದೆಯ ಹೋರಾಟವನ್ನು ಸ್ಮರಿಸಿಕೊಂಡರು.

ದುರ್ಗದ ಹುಲಿ ಎಂದೇ ಖ್ಯಾತರಾಗಿದ್ದ ವೀರ ಮದಕರಿ ನಾಯಕ ಭಾರತದ ಹಲವು ಸಂಸ್ಥಾನಗಳಲ್ಲಿ ಒಂದಾದ ಚಿತ್ರದುರ್ಗದ ಕೊನೆಯ ಅರಸನಾಗಿದ್ದನು. ಹೈದರ್ ಅಲಿಯು ಮೈಸೂರಿನ ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮದಕರಿ ನಾಯಕನನ್ನು ರಾಜಿ ಸಂಧಾನವೆಂದು ಕರೆಸಿ, ಮೋಸದಿಂದ ಬಂಧಿಸಿ, ಶ್ರೀರಂಗಪಟ್ಟಣದ ಸೆರೆಮನೆಯಲ್ಲಿಟ್ಟಿದ್ದನ್ನಲ್ಲದೆ, ಮತಾಂತರಗೊಂಡರೆ ಮಾತ್ರ ರಾಜ್ಯವನ್ನು ವಾಪಸ್ ನೀಡುವುದಾಗಿ ಹಾಗೂ ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಹೇಳುತ್ತಾನೆ. ಆಗ ಮದಕರಿ ನಾಯಕ ಅವರು ಜೀವವನ್ನು ನೀಡುತ್ತೇನೆಯೇ ಹೊರತು, ಧರ್ಮದ್ರೋಹ ಮಾಡುವುದಿಲ್ಲ ಎಂದು ಕೆಚ್ಚದೆಯಿಂದ ಹೇಳುತ್ತಾರೆ. ಆನಂತರ ಹೈದರ್ ಅಲಿಯ ಪುತ್ರ ಟಿಪ್ಪುಸುಲ್ತಾನ್ ಮೈಸೂರಿನ ಮತ್ತು ಚಿತ್ರದುರ್ಗದ ಬೇಡರ ಪಡೆಗಳು ಒಂದಾಗಿ ದಾಳಿ ಮಾಡಬಹುದು ಎಂದು ಹೆದರಿ, ಸೈನಿಕ ದಂಗೆಯಾದರೆ ನಮಗೆ ಸೋಲು ಖಚಿತ ಎಂದು ಭಾವಿಸಿ, ಯುದ್ಧಭಯದಿಂದ ಮದಕರಿ ನಾಯಕನಿಗೆ ವಿಷ ನೀಡಿ ಕೊಲೆ ಮಾಡುತ್ತಾನೆ. ರಾಜ್ಯದ ಜನರ ಕಲ್ಯಾಣಕ್ಕಾಗಿ ಬದುಕಿನುದ್ದಕ್ಕೂ ಶ್ರಮಿಸಿದ ಮದಕರಿ ನಾಯಕರ ಆಡಳಿತ ಇಂದಿಗೂ ಆದರ್ಶನೀಯವಾಗಿದೆ ಎಂದು ಸ್ಮರಿಸಿದರು.

ಸೋಮಸಮುದ್ರದ ಕೊಟ್ಟೂರುಸ್ವಾಮಿ ಮಠದ ಶ್ರೀ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಜೀವನ ನಡೆಸುವಂತಾಗಬೇಕು. ಈ ಹಿಂದಿನ ಎಲ್ಲ ಮಹನೀಯರು ಹಾಗೂ ಹೋರಾಟಗಾರರು ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ. ಅವರ ಆದರ್ಶಗಳು ನಮಗೆ ದಾರಿ ದೀಪವಾಗಬೇಕು ಎಂದು ಹೇಳಿದರು. ಮಾಜಿ ಸಂಸದ ಬಿ. ಶ್ರೀರಾಮುಲು ಅವರು ಮದಕರಿ ನಾಯಕರ ಆಡಳಿತವನ್ನು ಸ್ಮರಿಸಿಕೊಂಡರು.

ಮಾಜಿ ಶಾಸಕ ಸುರೇಶ್ ಬಾಬು, ಜೆಟಿ ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಾರದಾ ಪಾವಡಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಪಾಲಿಕೆ ಸದಸ್ಯ ಹನುಮಂತಪ್ಪ, ವಾಲ್ಮೀಕಿ ಸಮುದಾಯದ ಪ್ರಮುಖರಾದ ಜಯರಾಮ್, ರುದ್ರಪ್ಪ, ಕೆಇಬಿ ರುದ್ರಪ್ಪ, ರಾಮಸಾಗರ ನಾರಾಯಣಪ್ಪ, ಜಾಲಿಬೆಂಚೆ ಸುರೇಶ್, ಶ್ರೀಧರಗಡ್ಡೆ ಷಣ್ಮುಖಪ್ಪ, ಎಂ. ಹನುಮಂತಪ್ಪ, ಎಂ. ಜಂಬುನಾಥ್, ವಿ.ಎನ್. ಮಲ್ಲಿಕಪ್ಪ, ಬಿ.ಎನ್. ಚಂದ್ರಶೇಖರ್, ಎಂ. ಮಂಜುನಾಥ, ಸಿ. ತಿಪ್ಪೇಸ್ವಾಮಿ, ಎನ್. ನಾಗಯ್ಯ, ವೀರೇಶ್ ಸೋಮಸಮುದ್ರ, ಗೊರವರ ಬಸವರಾಜ್, ಎಂ. ರಮೇಶ್, ವಿ. ಗಂಗಾಧರ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.