ಸಾರಾಂಶ
ಮಹೇಂದ್ರ ದೇವನೂರು
ಕನ್ನಡಪ್ರಭ ವಾರ್ತೆ ಮೈಸೂರುವೈಭವಯುತ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸ್ತಬ್ಧಚಿತ್ರಗಳು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ, ಧಾರ್ಮಿಕ, ವೈದ್ಯಕೀಯ ಹಾಗೂ ಸಮ ಸಮಾಜದ ಪರಿಕಲ್ಪನೆಯನ್ನು ಹೊತ್ತು ಸಾಗಿದವು.
ದಸರಾ ಜಂಬೂಸವಾರಿಯಲ್ಲಿ 51 ಸ್ತಬ್ಧಚಿತ್ರಗಳು ತಮ್ಮ ತಮ್ಮ ಇಲಾಖೆ ಮತ್ತು ಆಯಾ ಜಿಲ್ಲೆಯ ಪರಿಚಯ ಮಾಡಿಕೊಟ್ಟವು. ಪ್ರಮುಖ ಯಾತ್ರಾ ಸ್ಥಳಗಳು, ಪ್ರಮುಖ ದೇವಾಲಯಗಳು, ಗಿರಿಧಾಮಗಳು, ಕಲೆ, ಸಂಸ್ಕೃತಿ, ವೈಜ್ಞಾನಿಕ ಕೊಡುಗೆ, ಸರ್ಕಾರದ ಜನಪರ ಯೋಜನೆಗಳು ಹೀಗೆ ಒಂದೊಂದು ಬಗೆಯ ಮಾಹಿತಿ ನೀಡುವ ಮೂಲಕ ಜನಗಳ ಮನಗೆದ್ದಿತು. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸ್ತಬ್ಧಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ಸಾಗಿ ನಾಡಿನ ವೈಭವ ಸಾರಿದವು.ರಾಜ್ಯದ 31 ಜಿಲ್ಲೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರಗಳು, ರಾಜ್ಯ ಸರ್ಕಾರಕದ 9 ಇಲಾಖೆಗಳ ಸ್ತಬ್ಧಚಿತ್ರಗಳು, 6 ನಿಗಮ ಮಂಡಳಿಗಳ ಸ್ತಬ್ಧಚಿತ್ರ, 2 ಕೇಂದ್ರ ಸರ್ಕಾರದ ಸ್ತಬ್ಧಚಿತ್ರಗಳು, 1 ವಿಶ್ವವಿದ್ಯಾನಿಲಯ ಹಾಗೂ 2 ಸ್ತಬ್ಧಚಿತ್ರ ಉಪ ಸಮಿತಿಯ ಸ್ತಬ್ಧಚಿತ್ರಗಳು ಸೇರಿ ಒಟ್ಟು 51 ಸ್ತಬ್ಧಚಿತ್ರಗಳು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡವು.
ಜಿಲ್ಲೆಗಳ ವೈವಿಧ್ಯತೆ ಅನಾವರಣ:ಯಾದಗಿರಿ ಜಿಲ್ಲೆಯ ತಿಂಥಣಿ ಮೌನೇಶ್ವರ ದೇವಾಲಯವು ಗಮನ ಸೆಳೆಯಿತು. ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಈ ದೇವಾಲಯದಲ್ಲಿ ಹಿಂದೂಗಳಿಗೆ ಮೌನೇಶ್ವರರಾಗಿ, ಮುಸ್ಲಿಮರಿಗೆ ಮೌನೋದ್ದೀನ್ಆಗಿ ಅಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಮೌನೇಶ್ವರ ದೇವಾಲಯದ ಮೇಲ್ಭಾಗದಲ್ಲಿಯೇ ಮೌನೋದ್ದೀನರ ದರ್ಗಾ ಹಾಗೂ ಮಜಹಾರ್ ಇದೆ.
ಕೊಡಗು ಜಿಲ್ಲೆಯಿಂದ ಭೂ ಸಂರಕ್ಷಣೆ, ಹಾರಂಗಿ ಜಲಾಶಯ, ಕಾಫಿ- ಕಾಳು ಮೆಣಸು ತೋಟ ಹಾಗೂ ಆನೆ ಕ್ಯಾಂಪ್ ಹೆಚ್ಚು ಆಕರ್ಷಕವಾಗಿತ್ತು. ಕಾವೇರಿ ನದಿಯ ಉಪ ನದಿಯಾದ ಹಾರಂಗಿಗೆ ಸೋಮವಾರಪೇಟೆ ತಾಲೂಕು ಹುದುಗೂರು ಗ್ರಾಮದಲ್ಲಿ ನಿರ್ಮಿಸಿರುವ ಜಲಾಶಯದ ಜತೆಗೆ, ದುಬಾರೆ ಆನೆ ಶಿಬಿರ, ಕಿತ್ತಳೆ, ದ್ರಾಕ್ಷಿ, ಕಾಫಿ ಬೀಜದ ಜೊತೆಗೆ ಅಲ್ಲಿನ ಪ್ರಕೃತಿಯ ಸೊಬಗನ್ನು ಮನೋಹರವಾಗಿ ಚಿತ್ರಿಸಲಾಗಿತ್ತು.ರಾಯಚೂರು ಜಿಲ್ಲೆಯಿಂದ ಮುದ್ಗಲ್ ಕೋಟೆ ಮತ್ತು ಗಾಣದಾಳ ಪಂಚಮುಖಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಸೊಗಡು ಕೂಡ ಗಡಿನಾಡ ವೈಭವವನ್ನು ತೋರ್ಪಡಿಸಿತು. ಜೇನುಕುರುಬರ ನೃತ್ಯದ ಹಿನ್ನೆಲೆಯಲ್ಲಿ ಜೋನು ಗೂಡು, ನೇನುಹುಳು, ಸೋಲಿಗರ ಜನಜೀವನ ಚಿತ್ರಿಸಲಾಗಿತ್ತು.
ಹಾಲು ಉತ್ಪಾದಕ ಮಹಾಮಂಡಳಇಂದ ಕ್ಷೀರ ಭಾಗ್ಯ, ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥವು ಹಾಲನ ಉತ್ಪಾದನೆ, ಗುಣಮಟ್ಟದ ಜೊತಗೆ ಕರ್ನಾಟಕದ ನಂದಿನಿ ಹಾಲು ಮತ್ತು ಅದರ ಉತ್ಪನ್ನವು ಪೂರೈಕೆಯಾಗುವ ರಾಜ್ಯಗಳ ಕುರಿತು ಮಾಹಿತಿ ನೀಡಿತು.ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಮೈಸೂರು ಸ್ಯಾಂಡಲ್ ಸೋಪ್ನ ಕಿರುಪರಿಚಯ ಮಾಡಿಕೊಟ್ಟಿತು. ಪ್ರಖ್ಯಾತ ಮೈಸೂರು ಶ್ರೀಗಂಧದ ಉತ್ಪನ್ನಗಳ ಮಾಹಿತಿಯನ್ನೇ ಇದು ಒಳಗೊಂಡಿತ್ತು. ಬಳಿಕ ಬಂದ ವಿಜಯನಗರ ಜಿಲ್ಲೆಯಿಂದ ನಿರ್ಮಿತವಾದ ವಿಜಯನಗರ ಸಾಮ್ರಾಜ್ಯದ ವೈಭವದ ಸ್ತಬ್ಧಚಿತ್ರವು ಗಮನ ಸೆಳೆಯಿತು. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ರಸ್ತೆ ಬದಿಯಲ್ಲಿ ಚಿನ್ನವನ್ನು ಅಳೆಯುತ್ತಿರುವ ಅಣಕನ್ನು ಬೊಂಬೆಗಳ ಮೂಲಕ ಕಟ್ಟಿಕೊಡಲಾಗಿತ್ತು. ಹಂಪಿಯ ದೇವಾಲಯ, ಕಲ್ಲಿನ ರಥ, ಶ್ರೀಕೃಷ್ಣದೇವರಾಯನ ಆಡಳಿತವನ್ನು ನೆನಪಿಸಿತು.
ಬೆಂಗಳೂರು ನಗರ ಜಿಲ್ಲೆಯ ಮಹಾತ್ಮ ಗಾಂಧೀಜಿ ಮತ್ತು ವಿಧಾನಸೌಧ, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿನ ಕನ್ನಡ ಪಟ್ಟ ದೇವರು ಪೂಜ್ಯಶ್ರೀ ಮದ್ಘನಲಿಂಗ ಚಕ್ರವರ್ತಿ ಚನ್ನಬಸವ ಪಟ್ಟದ್ದೇವರು, ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ, ಶ್ರೀ ಹುಲಿಗಮ್ಮದೇವಿ ದೇವಸ್ಥಾನ, ಹಿರೇ ಬೆಣಕಲ್ ಶಿಲಾ ಸಮಾಧಿ, ಇಟಗಿ ಮಹದೇವ ದೇವಾಲಯವು ಅಲ್ಲಿನ ಪ್ರಾಚೀನತೆ ಮತ್ತು ಕಲೆ ಎರಡನ್ನೂ ಪ್ರಸ್ತುತಪಡಿಸಿತು.ಪ್ರವಾಸೋದ್ಯಮ ಇಲಾಖೆಯು ಒಂದು ರಾಜ್ಯ ಹಲವು ಜಗತ್ತು ಹೆಸರಿನಲ್ಲಿ ಸಿದ್ಧಪಡಿಸಿದ್ದ ಸ್ತಬ್ಧಚಿತ್ರವು ಚಾಮುಂಡಿಬೆಟ್ಟದ ಮೇಲಿನ ನಂದಿ, ಸಾಹಸ ಕ್ರೀಡೆ, ಜಲಕ್ರೀಡೆ, ಯಾಣ, ಗೋಲ್ಗುಂಬಜ್ ನ ಚಿತ್ರಣವನ್ನು ಒಳಗೊಂಡಿತ್ತು. ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಲಿಡ್ಕರ್ ಉತ್ಪನ್ನಗಳ ಸ್ತಬ್ಧಚಿತ್ರ, ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರಖ್ಯಾತ ದೇವಾಲಯ ಮುರುಡೇಶ್ವರ, ಶಿವನಪ್ರತಿಮೆಯ ಪ್ರತಿರೂಪ ನಿರ್ಮಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಪೊಕ್ಕುಂದ, ಹೆಗ್ಗುಂದದ ರಾಮದೇವರ ಬೆಟ್ಟ, ನಿಜಗಲ್ಲು ದುರ್ಗ, ಬಿನ್ನ ಮಂಗಲ ದೇವಸ್ಥಾನ, ದಾವಣಗೆರೆ ಜಿಲ್ಲೆಯಿಂದ ನಾವು ಮನುಜರು, ಕೋಲಾರ ಜಿಲ್ಲೆಯಿಂದ ವಿಶ್ವ ವಿಖ್ಯಾತ ಕೋಟಿಲಿಂಗೇಶ್ವರಸ್ವಾಮಿ ದೇವಸ್ಥಾನದ ಪರಿಚಯ, ಉಡುಪಿ- ಜಿಲ್ಲೆಯ ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗನ್ನು ಕಟ್ಟಿಕೊಟ್ಟಿತು.ಶಿವಮೊಗ್ಗ ಜಿಲ್ಲೆಯಿಂದ ಸೊರಬ ತಾಲೂಕಿನ ಕೋಟಿಪುರ ಕೈತಭೇಶ್ವರ ದೇವಾಲಯ, ಬಳ್ಳಾರಿ ಜಿಲ್ಲೆಯಿಂದ ಕುರುಗೋಡು ದೇವಸ್ಥಾನ, ಬಾಗಲಕೋಟೆ ಜಿಲ್ಲೆಯಿಂದ ರನ್ನನ ಕಾವ್ಯ ಗದಾಯುದ್ದ, ಹಾವೇರಿ ಜಿಲ್ಲೆಯಿಂದ ಏಲಕ್ಕಿ ಕಂಪಿನ ನಾಡು ಹಾಗೂ ಸಂತರು, ಸಾಹಿತಿಗಳ ನೆಲೆಬೀಡು, ಮಂಡ್ಯ ಜಿಲ್ಲೆಯಿಂದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಅಣೆಕಟ್ಟು, ರಾಮನಗರ- ಜಿಲ್ಲಾ ವೈವಿಧ್ಯತೆಗಳು, ಕಲಬುರಗಿ ಜಿಲ್ಲೆಯಿಂದ ತೊಗರಿಯ ಕಣಜ ಕಲಬುರಗಿ ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು.
ವಿಜಯಪುರದ ಬಸವನ ಬಾಗೇವಾಡಿಯ ಮೂಲ ನಂದಿ ಬಸವೇಶ್ವರ ದೇವಾಲಯ, ದಕ್ಷಿಣ ಕನ್ನಡ ಜಿಲ್ಲೆ- ಕರಾವಳಿಯ ವಾಣಿಜ್ಯ ಮತ್ತು ಪ್ರವಾಸೋದ್ಯಮ, ಮೈಸೂರು ಜಿಲ್ಲೆಯಿಂದ ಮಾನವಕುಲದ ಸಮಾನತೆ, ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ, ಬೆಳಗಾವಿ ಜಿಲ್ಲೆಯಿಂದ ಕಿತ್ತೂರು ಕದನದ 200ನೇ ವರ್ಷಾಚರಣೆ, ಚಿತ್ರದುರ್ಗ ಜಿಲ್ಲೆಯಿಂದ ಚಿತ್ರದುರ್ಗದ ಕೋಟೆ ಮತ್ತು ಗಾಳಿಯಂತ್ರಗಳು, ಚಿಕ್ಕಬಳ್ಳಾಪುರ- ನಂದಿ ರೋಪ್ವೇ, ಗದಗ ಜಿಲ್ಲೆಯಿಂದ ಗ್ರಾಮ ಸಭೆ- ಹಳ್ಳಿಯ ವಿಧಾನಸಭೆ.ಧಾರವಾಡ ಜಿಲ್ಲೆಯಿಂದ ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು, ಹಾಸನ ಜಿಲ್ಲೆಯಿಂದ ವಿಶ್ವ ಪಾರಂಪರಿಕ ತಾಣ ಬೇಲೂರು- ಹಳೆಬೀಡು, ಚಿಕ್ಕಮಗಳೂರು- ತೇಜಸ್ವಿ ವಿಸ್ಮಯ ಲೋಕ, ತುಮಕೂರು- ಔಷಧ ಸಸ್ಯಗಳ ಸಂಜೀವಿನಿ ಪರ್ವತ ಸಿದ್ಧರಬೆಟ್ಟ ಮತ್ತು ಬಯಲು ಸೀಮೆಯನ್ನಾಳಿದ ಹೆಮ್ಮೆಯ ಅರಸರು.
ನಿಗಮ ಮಂಡಳಿಗಳು ಸಾಧನೆ:ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್)- ಕ್ಷೀರ ಭಾಗ್ಯ ಮತ್ತು ಕ್ಷೀರ ಸಂಜೀವಿನಿ ಯೋಜನೆಗಳ ಯಶಸ್ವಿ ಪಥ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ (ಲಿಡ್ಕರ್)- ನಿಗಮದ ಉತ್ಪನ್ನಗಳ ಮಾದರಿ, ಕರ್ನಾಟಕ ರೇಷ್ಮೆ ಉದ್ಯಮ ನಿಗಮದಿಂದ ಕರ್ನಾಟಕ ರೇಷ್ಮೆ ನಮ್ಮ ಹೆಮ್ಮೆ, ಕಾವೇರಿ ನೀರಾವರಿ ನಿಗಮದಿಂದ ಏಕತೆಯಲ್ಲಿ ಅನೇಕತೆ ಸಾರುವ ಅಣೆಕಟ್ಟು ಹಾಗೂ ಜಲ ಸಂರಕ್ಷಣೆ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ- ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ವಿವಿಧ ಇಲಾಖೆಗಳು ಕಾರ್ಯಕ್ರಮ:ಪ್ರವಾಸೋದ್ಯಮ ಇಲಾಖೆಯಿಂದ ಒಂದು ರಾಜ್ಯ ಹಲವು ಜಗತ್ತು, ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಹಿತರಕ್ಷಣೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು, ಸಮಾಜ ಕಲ್ಯಾಣ ಇಲಾಖೆಯಿಂದ ಸಮ ಸಮಾಜ ನಿರ್ಮಾಣಕ್ಕಾಗಿ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ- ಇಲಾಖೆಯ ಕಿರು ಪರಿಚಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೆಣ್ಣು ಭ್ರೂಣಹತ್ಯೆ ತಡೆ, ಅಂಧತ್ವ ಶ್ರವಣ ದೋಷ ನಿವಾರಣ ಕಾರ್ಯಕ್ರಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುಷ್ಠಾನ ಕಾರ್ಯಕ್ರಮ, ವಾರ್ತಾ ಇಲಾಖೆಯಿಂದ ವಿಶ್ವಗುರು ಬಸವಣ್ಣ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ಚಿತ್ರಣವನ್ನು ನೀಡಿದವು.
ಉಳಿದಂತೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿ.ಎಫ್.ಟಿ.ಆರ್.ಐ)- ಕೃಷಿ ಸರಕುಗಳ ಮೌಲ್ಯವರ್ಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಂಸ್ಥೆಯ ಕೊಡುಗೆ, ಭಾರತೀಯ ರೈಲ್ವೆ ಇಲಾಖೆಯಿಂದ ವಂದೇ ಭಾರತ್ಎಕ್ಸ್ಪ್ರೆಸ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ- ನಿಮ್ಮ ಮನೆಯೇ ನಿರಂತರ ಪಾಠಶಾಲೆ, ದಸರಾ ಸ್ತಬ್ಧಚಿತ್ರ ಉಪ ಸಮಿತಿಯಿಂದ ಸಾಮಾಜಿಕ ನ್ಯಾಯ ಹಾಗೂ ಆನೆ ಬಂಡಿ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು.