ಹುಬ್ಬಳ್ಳಿ:

"ಜರೂರತ್ ಜರೂರತ್ ಜರೂರತ್ ಹೈ, ಏಕ್ ಸಿರಿಮತಿ ಕಿ, ಕಲಾವತಿ ಕಿ, ಸೇವಾ ಕರೇಗಿ ಜೋ ಪತಿ ಕೆ ..... " ಎಂಬ ಹಳೇ ಹಿಂದಿ ಸಿನೆಮಾ ಹಾಡು ಗುನುಗುನಿಸುತ್ತಾ ಶುರು ಆಗುವ "ಒಮ್ಮೆ ಹೆಣ್ಣಾಗು " ನಾಟಕ ಮಹಿಳೆಯರ ಜೀವನಾನುಭವ ಹೇಳುತ್ತಾ ಒಳತುಡಿತಗಳ ಅಂತರಂಗವನ್ನು ಕಲಾತ್ಮಕವಾಗಿ ತೆರೆದಿಡುತ್ತಾ ಸಾಗುವ ರಂಗರೂಪಕ. ಪುರುಷ ಪ್ರಧಾನ ಸಮಾಜದ ಕತ್ತಲುಮುಖದ ಮೇಲೆ ಬೆಳಕು ಚೆಲ್ಲುವ ನಿರೂಪಣೆ ಪ್ರೇಕ್ಷಕರ ಮನದ ಕದ ತಟ್ಟುತ್ತದೆ. ಹೆಣ್ಣಿನ ನೈಜ ತುಡಿತವನ್ನು ಹೃದಯದಿಂದ ಹೃದಯಕ್ಕೆ ಮುಟ್ಟುತ್ತದೆ.

ವಿಶ್ವರಂಗಭೂಮಿ ದಿನದಂಗವಾಗಿ ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘ ಸಂಯುಕ್ತವಾಗಿ ಧಾರವಾಡದಲ್ಲಿ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಬಾನು ಮುಸ್ತಾಕ ಅವರ ಒಮ್ಮೆ ಹೆಣ್ಣಾಗು ಕಥೆ ಆಧರಿಸಿದ ಈ ನಾಟಕ ಪ್ರದರ್ಶನಗೊಂಡಿತು.

ಸತತ ಮೂರು ಹೆಣ್ಣು ಹೆತ್ತು ಕೊಡುವ, ಗಂಡು ಮಗು ಹಡೆಯದ ಪತ್ನಿಯ ಬಗ್ಗೆ ಪತಿ ತೋರುವ ಅಸಡ್ಡೆ, ಮತ್ತೊಬ್ಬಳನ್ನು ಮದುವೆ ಆಗುವ ತವಕ ಕಂಡು ಸಂಕಟ ಅನುಭವಿಸುವ ಪತ್ನಿಯನ್ನು ತುಚ್ಚವಾಗಿ ಕಂಡು ನಿರ್ಲಕ್ಷಿಸುವ ಸಮಾಜ ಒಂದೆಡೆಯಾದರೆ, ಧರ್ಮ ಗುರು ಮೌಲ್ವಿಯೂ ಮತ್ತೊಂದು ಮದುವೆ ಆಗಲು ಗಂಡಿಗೆ ಅವಕಾಶವಿದೆ ಎಂದು ಪದ್ಧತಿಯ ನೆಪ ಹೇಳುವ ನೀಚ ಪ್ರವೃತ್ತಿ ಇನ್ನೊಂದೆಡೆ. ಸಾಮಾಜಿಕ ಕೌಟುಂಬಿಕ ಸ್ಥಿತಿಗತಿಗಳೇ ಪರಂಪರೆಯ ಕಾಲಾಳುಗಳಾಗಿ ಮುಂದುವರೆದಿರುವ ವಿಪರ್ಯಾಸವನ್ನು ಚಿತ್ರಿಸಲಾಗಿದೆ.

ಇಬ್ಬರೇ ಕಲಾವಿದೆಯರು:


ಹೆಣ್ಣು ತಾಯಿ, ಮಗಳು, ಪತ್ನಿ, ಸೋದರಿ, ಸಖಿಯಾಗಿ ಯಾತನೆ ಅನುಭವಿಸುವ ಎರಡೂ ಪಾತ್ರಗಳನ್ನು ರಂಗದ ಮೇಲೆ ಇಬ್ಬರು ನಟಿಯರೇ ಕಾವ್ಯಕಥನದಂತೆ ಹೇಳುತ್ತಾ ಸಾಗುವದೇ ಪ್ರಯೋಗ ನೋಡುಗರನ್ನು ತನ್ನೆಡೆ ಸೆಳೆಯುತ್ತದೆ.

ಮೈಸೂರು ರಂಗಾಯಣದ ಹಿರಿಯ, ನುರಿತ, ಅನುಭವಿ ನಟಿಯರಾದ ನಂದಿನಿ ಕೆ. ಆರ್. (ಹಿರೇಮಠ), ಶಶಿಕಲಾ ಬಿ. ಎನ್. ಇಬ್ಬರೇ ಗಂಡ, ಹೆಂಡತಿ, ಅವ್ವ, ಮೌಲ್ವಿ, ಅಣ್ಣ ಬೇರೆ ಬೇರೆ ಪಾತ್ರಗಳಲ್ಲಿ ಒಂದಾಗಿ ನೈಜವಾಗಿ ಅಭಿನಯಿಸಿದ್ದು ವಿಶೇಷ.ಮಹಿಳಾಪರ ಚಿಂತನ, ಮಂಥನ ನಡೆಸುವ ಸ್ತ್ರೀವಾದಿ ಹೋರಾಟದತ್ತ ವಾಲುವದು ಸಹಜ ಎನಿಸುತ್ತದೆ.ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಈ ನಾಟಕ ಹೆಣೆದಂತಿದೆ ಎಂಬ ವಿಶ್ಲೇಷಣೆಗೂ ಇಲ್ಲಿ ಅರ್ಥವಿದೆ. ಮಾನವೀಯತೆ ಮತ್ತು ಅಂತಃಕರಣದ ವಸ್ತು ಹೊಂದಿರುವ ಕತೆ ಬರೆಯುವ ಬಾನು ಮುಸ್ತಾಕರ ಸಂಕಲನದ ಆಯ್ದ ಕತೆ '''' ಶೈಸ್ತಾ ಮಹಲನ ಕಲ್ಲು ಚಪ್ಪಡಿಗಳು, ಕರಿನಾಗರಗಳು, ಎದೆಯ ಹಣತೆ ಮತ್ತು ಒಮ್ಮೆ ಹೆಣ್ಣಾ ಗು ಕತೆಗಳ ಮಹತ್ವದ ಭಾಗ ಗಳನ್ನು ಆಯ್ದು ಕಟ್ಟಿದ ರಂಗರೂಪ ಇದಾಗಿದೆ.ಮಹಿಳಾ ಲೇಖಕಿಯ ಈ ಕತೆಗೆ ಪರಿಕಲ್ಪನೆ, ರಂಗ ವಿನ್ಯಾಸ ಮಾಡಿ ನಾಟಕ ನಿರ್ದೇಶಸಿದವರು ಯುವ ಮಹಿಳಾ ರಂಗ ನಿರ್ದೇಶಕಿ ಎನ್. ಎಸ್. ಡಿ. ಪದವಿಧರೆ ಡಾ. ಸವಿತಾರಾಣಿ. ಇವರಿಗೆ ಸಹನಿರ್ದೇಶಕಿಯಾಗಿ ಜತೆಯಾದವರು ಇನ್ನೊರ್ವ ರಂಗ ತಜ್ಞೆ ಎಚ್. ಕೆ. ಶ್ವೇತಾರಾಣಿ , ಸಂಗೀತ ನಿರ್ವಹಣೆ ಮೀನಾಕ್ಷಿ ವಗದಾಳೆ ಹೀಗೆ ಸ್ತ್ರೀ ರಂಗ ಪ್ರತಿಭೆಗಳ ತಂಡವೇ ನಾಟಕ ಹೊರಹೊಮ್ಮುವದರ ಹಿಂದೆ ಸ್ತ್ರೀ ಪ್ರತಿಭಾ ತಂಡವೇ ಪ್ರಮುಖ ಕಾರ್ಯ ಮಾಡಿದ್ದೇ ವಿಶೇಷ.ವೈಸೂರು ರಂಗಾಯಣ ಪ್ರಸ್ತುತ ಪಡಿಸಿರುವ ಈ ನಾಟಕದ ನೇಪಥ್ಯದಲ್ಲಿ ಮಹೇಶ ಕಲ್ಲತ್ತಿ. ( ಬೆಳಕು ವಿನ್ಯಾಸ ), ಪಿ. ಜನಾರ್ಧನ ( ರಂಗಸಜ್ಜಿಕೆ ), ಮೋಹನ ( ವಸ್ತ್ರ ವಿನ್ಯಾಸ ), ರವಿ, ನವೀನ ಭೂಮಿ ಕಾರ್ಯ ನಿರ್ವಹಿಸಿದ್ದಾರೆ.---

ಫೋಟೋ- ಡ್ರಾಮಾ