ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಶಾಲೆಗೆ ತಡವಾಗಿ ಬರುವ, ಕುಡಿದ ಮತ್ತಿನಲ್ಲಿರುವ ಶಿಕ್ಷಕರು, ಸಹಿ ಹಾಕಿದ ತಕ್ಷಣವೇ ಹೊರ ಹೋಗುವ ಶಿಕ್ಷಕರು, ಶಾಲೆಯಲ್ಲಿಯೂ ತಮ್ಮ ಚಿಕ್ಕ ಮಕ್ಕಳ ಪಾಲನೆಯಲ್ಲಿಯೇ ಕಾಲ ಕಳೆಯುವ ಶಿಕ್ಷಕಿಯರು, ಶೌಚಾಲಯ, ಆವರಣ ಗೋಡೆ ಸಮಸ್ಯೆ ಹೀಗೆ ಹತ್ತು ಹಲವು ಶಾಲಾ ಆತಂಕಗಳನ್ನು ಮಕ್ಕಳು ಶಾಸಕ ಶ್ರೀನಿವಾಸ ಮಾನೆ ಎದುರು ಬಿಚ್ಚಿಟ್ಟರು.ಇಲ್ಲಿನ ಗುರುಭವನದಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಮಕ್ಕಳ ಸಭೆಯಲ್ಲಿ ಮಕ್ಕಳು ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆದರು. ವಿದ್ಯಾರ್ಜನೆಗಾಗಿ ಇರುವ ಹಲವು ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಒಳ್ಳೆಯ ಶಿಕ್ಷಣಕ್ಕೆ ಇರುವ ಆತಂಕ ಸರಿಪಡಿಸಬೇಕು ಎಂದು ಅಹವಾಲು ಸಲ್ಲಿಸಿದರು.
ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಾದ ಪ್ರಮಿಳಾ ಕೂಡಲ, ಅಕ್ಷತಾ ಸಾಳುಂಕೆ, ದೀಪಾ ಮರೆಕ್ಕನವರ, ಲಕ್ಷ್ಮೀ ಲಮಾಣಿ, ಚನ್ನಬಸಪ್ಪ, ಪೂಜಾ ಬಡಗಿ, ವನಿತಾ, ಗೀತಾ ಕಡೆಮನಿ, ರೇಣುಕಾ ಬಾರಂಗಿ, ಕಾವೇರಿ ಮತ್ತಿತರರು, ಶಿಕ್ಷಕರ ಮೇಲೆ ನಮಗೆ ಗೌರವವಿದೆ. ಆದರೆ ತಡವಾಗಿ ಬಂದು ನಮ್ಮ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗುತ್ತಿದೆಯಲ್ಲ ಇದಕ್ಕೇನು ಮಾಡುವುದು. ಕುಡಿದ ಮತ್ತಿನಲ್ಲಿ ಬಂದ ಶಿಕ್ಷಕರಿಂದ ಹೇಗೆ ಶಿಕ್ಷಣ ಪಡೆಯೋಣ ಎಂಬ ಆತಂಕ ವ್ಯಕ್ತಪಡಿಸಿದರು.ಶಾಲೆಗೆ ಬಂದು ಹೊರಟೇ ಹೋಗುವ ಶಿಕ್ಷಕರಿಂದ ನಮ್ಮ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಿದೆ. ನಾವು ಹಳ್ಳಿಯ ಬಡ ಮಕ್ಕಳು ನಮ್ಮ ಶಿಕ್ಷಕರು ಸರಿಯಾಗಿ ಶಾಲೆಗೆ ಬಂದು ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಿ ಎಂದು ವಿನಂತಿಸಿದರು.
ಶಾಸಕ ಶ್ರೀನಿವಾಸ ಮಾನೆ ಮಕ್ಕಳ ಅಹವಾಲು ಸಮಾಧಾನದಿಂದ ಆಲಿಸಿ, ಲಿಖಿತ ಮನವಿ ಸ್ವೀಕರಿಸಿ ಶಾಲೆಗಳಲ್ಲಿರುವ ಎಲ್ಲ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಶೈಕ್ಷಣಿಕ ಉನ್ನತಿಗೆ ನಾನು ಬದ್ಧ. ಕೇವಲ ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇನೆ. ಉತ್ತಮ ಶಿಕ್ಷಣ ನೀಡುವಲ್ಲಿ ಲೋಪವಾದರೆ ಅದನ್ನು ಅಧಿಕಾರಿಗಳ ಮೂಲಕ ಸರಿಪಡಿಸಲಾಗುವುದು. ವಿದ್ಯುತ್ ಲೈನ್ ಸ್ಥಳಾಂತರದ ವಿಷಯದಲ್ಲಿ ಪಾಲಕರು ಹೆಸ್ಕಾಂ ಅಧಿಕಾರಿಗಳನ್ನು ಕಂಡು ನಿಯಮದಡಿ ಸ್ಥಳಾಂತರಕ್ಕೆ ಮನವಿ ಸಲ್ಲಿಸಿದರೆ ಶೀಘ್ರ ಈ ಕಾರ್ಯ ಕೈಗೂಡುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ತಾಲೂಕಿನಲ್ಲಿ ಶೈಕ್ಷಣಿಕ ಹೊಸ ಪರ್ವ ಆರಂಭವಾಗಿದೆ. ಅದು ಶಾಲಾ ಮಕ್ಕಳ ಹಿತಕ್ಕೆ ತುಂಬಾ ಸಹಕಾರಿಯಾಗಿದೆ. ಆದರೆ ಕೆಲವಡೆ ಇರುವ ಗಂಭೀರ ಸಮಸ್ಯೆ ಗುರುತಿಸಿ ಮಕ್ಕಳ ಅಹವಾಲನ್ನು ಸ್ವೀಕರಿಸಿ ಅಧಿಕಾರಿಗಳ ಮೂಲಕ ಕೂಡಲೇ ಮಕ್ಕಳ ಶೈಕ್ಷಣಿಕ ಸಮಸ್ಯೆ ಪರಿಹರಿಬೇಕು ಎಂದು ಮನವಿ ಮಾಡಿದರು. ಆದರ್ಶ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಮಲಾಕ್ಷಿ ಬೆಳಗಲಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿದ್ದರು.